Kannada essays

ಭಾರತದಲ್ಲಿ ನಗರೀಕರಣ ಸಮಸ್ಯೆ ಮತ್ತು ಸವಾಲುಗಳು | Urbanization problem and challenges in India 2024 | Essay for IAS, KAS

Table of Contents

ಭಾರತದಲ್ಲಿ ನಗರೀಕರಣ (Urbanization in India):

ನಗರ ಮತ್ತು ನಗರೀಕರಣದ ಅರ್ಥ ಮತ್ತು ವ್ಯಾಖ್ಯೆ:

ಸಾಮಾನ್ಯವಾಗಿ ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ಕೃಷಿಯೋತ್ತರ ಚಟುವಟಿಕೆಗಳನ್ನು ಅವಲಂಬಿಸಿರುವ ಮಾಧ್ಯಮಿಕ ಸಂಬಂಧವುಳ್ಳ ವೈವಿಧ್ಯಮಯ ಜೀವನ ವಿಧಾನವುಳ್ಳ ಜನವಸತಿ ಪ್ರದೇಶವನ್ನು ನಗರ ಎನ್ನುತ್ತೇವೆ.

ವ್ಯಾಖ್ಯೆಗಳು: ನಗರೀಕರಣ

ಲೂಯಿಸ್‌ ವರ್ತ ಪ್ರಕಾರ ನಗರವನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸಿದ್ದಾರೆ. “ನಗರವೆಂಬುದು ದೊಡ್ಡ ಗಾತ್ರದ, ಹೆಚ್ಚು ಜನ ಸಾಂದ್ರತೆಯುಳ್ಳ ಹಾಗೂ ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿದ ಜನರ ಶಾಶ್ವತ ನೆಲೆಯಾಗಿದೆ”.

ಜಾರ್ಜ್ ಎತಿಯೋಡರ್‌ಸನ್ (Gergeatheodorson)ರ ಪ್ರಕಾರ “ನಗರವು ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ, ಕೃಷಿಯೇತರ ವೃತ್ತಿಗಳ ಮೇಲೆ ಹೆಚ್ಚು ಆವಲಂಬಿತವಾದ ವಿಶೇಷ ಪರಿಣತಿ ಹೊಂದಿರುವ, ಅವೈಯಕ್ತಿಕ ಮತ್ತು ಮಾಧ್ಯಮಿಕ ಸಂಬಂಧವನ್ನು ಹೊಂದಿರುವ ಹಾಗೂ ಔಪಚಾರಿಕ ಸಾಮಾಜಿಕ ನಿಯಂತ್ರಣಗಳ ಮೇಲೆ ಅವಲಂಬಿತವಾಗಿರುವ ಸಮುದಾಯವಾಗಿದೆ.”

ಸಾಮಾನ್ಯವಾಗಿ ನಗರೀಕರಣವನ್ನು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಯಿಂದಾಗಿ ನಗರದಲ್ಲಿ ಜನಸಂಖ್ಯೆಯು ಹೆಚ್ಚಳವಾಗಿ ನಗರವಾಸಿಗಳಾಗುವುದನ್ನು ನಗರೀಕರಣ ಎಂದು ಕರೆಯುತ್ತೇವೆ.

ಥಾನ್ಸನ್ ವಾರೆನ್ ಸಮಾಜ ವಿಜ್ಞಾನದ ವಿಶ್ವಕೋಶದಲ್ಲಿ ಈ ರೀತಿ ವ್ಯಾಖ್ಯಾನಿಸಿದ್ದಾರೆ. “ನಗರೀಕರಣವೆಂದರೆ ಕೃಷಿಯಿಂದ ಕೃಷಿಯೇತರ ಚಟುವಟಿಕೆಗಳಾದ ವ್ಯಾಪಾರ, ಉತ್ಪಾದನೆ, ನೌಕರಿ ಇತ್ಯಾದಿ ವೃತ್ತಿಗಳ ಮೇಲೆ ಅವಲಂಬಿಸಿರುವುದೇ ಆಗಿವೆ.”

ಭಾರತದ ನಗರಗಳ ಐತಿಹಾಸಿಕ ಹಿನ್ನೆಲೆ (Historical Background of Urbanization in India): ನಗರೀಕರಣ
ಭಾರತೀಯರು ಸುಮಾರು 5,000 ವರ್ಷಗಳ ಹಿಂದೆಯೇ ನಗರಗಳನ್ನು ನಿರ್ಮಿಸಿದ್ದರು. ಸಿಂಧೂ ನಾಗರೀಕತೆಯ ಕಾಲದಲ್ಲಿ ಹರಪ್ಪ ಮತ್ತು ಮೆಹಂಜೋದಾರ್ ಪ್ರಮುಖ ನಗರಗಳಾಗಿದ್ದವು. ನಗರಗಳ ಬಡಾವಣೆ, ವಿಶಾಲವಾದ ರಸ್ತೆಗಳ, ಒಳಚರಂಡಿ ವ್ಯವಸ್ಥೆ ಎಲ್ಲವೂ ಉತ್ತಮ ನಗರ ಆಡಳಿತವನ್ನು ಸಂಕೇತಿಸುತ್ತಿದ್ದವು. ಮಗದ ಮತ್ತು ವೇದಗಳ ಕಾಲದಲ್ಲಿ ಆಯೋದ್ಯಾ, ಕಾಶಿ, ಪಾಟಲಿಪುತ್ರ, ಇಂದಪಸ್ಥ ನಗರಗಳು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದವು.

ಬೌದ್ಧರ ಕಾಲದಲ್ಲಿ ನಳಂದ, ತಕ್ಷಶಿಲಾ, ಕಾಶಿ, ಮಿಥಿಲ, ಕೌಶಂಬಿ ನಗರಗಳು ಬೆಳವಣಿಗೆಯಾಗಿದ್ದವು. ದೇವಾಲಯ ನಗರಗಳಾದ ಆಯೋದ್ಯ, ಮಥುರಾ, ಹರಿದ್ವಾರ, ದ್ವಾರಕ, ಕಾಶಿ, ಪ್ರಯಾಗ, ಪುರಿ, ಕಂಚಿ ಮತ್ತು ಮಧುರೆಗಳು ಪ್ರಾಚೀನ ನಗರಗಳಾಗಿದ್ದವು.ನಗರೀಕರಣ

ಮಧ್ಯ ಕಾಲದಲ್ಲಿ ಆಗ್ರ, ದೆಹಲಿ, ಫತೇಪುರ್‌ ಸಿಕ್ರಿ, ಲಕ್ಷ್ಮೀ, ಹೈದರಾಬಾದ್, ವಿಜಯಪುರ, ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು, ಅಹಮದ್‌ನಗರ ಇತ್ಯಾದಿಗಳು ಬೆಳವಣಿಗೆಯಾದುವು.

ಬ್ರಿಟೀಷರ ಕಾಲದಲ್ಲಿ ಬಂದರು ನಗರಗಳಾದ ಕೋಲ್ಕತ್ತಾ, ಮುಂಬೈ, ಚೆನ್ನೈ ನಗರಗಳು, ಸ್ವಾತಂತ್ರ್ಯದ ನಂತರ ಚಂಡೀಗಡ್, ಭುವನೇಶ್ವರ್, ಗಾಂಧೀನಗರ, ದುರ್ಗಪುರ, ನೈವೇಲಿ ಮೊದಲಾದ ನಗರಗಳು ಬೆಳೆದವು. ಅದೇ ರೀತಿ ಕೈಗಾರಿಕಾ ನಗರಗಳಾದ ಬಿಲಾಯಿ, ರೋರ್‌ ಖೇಲ್, ದುರ್ಗಾಪುರ್, ಚಿತ್ತರಂಜನ್, ಭದ್ರಾವತಿ, ರೂಪನಾರಾಯಣಪುರ, ವಿಶಾಖಪಟ್ಟಣ ಮೊದಲಾದ ನಗರಗಳು ಬೆಳವಣಿಗೆಯಾಗಿದ್ದು ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯಿಂದಾಗಿ ನಗರಗಳು ಮಹಾನಗರಗಳಾಗಿ ಪರಿವರ್ತನೆ ಹೊಂದುತ್ತಿವೆ.

ಭಾರತದಲ್ಲಿ 1,00,000ಕ್ಕಿಂತ ಕಡಿಮೆ, ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಪಟ್ಟಣಗಳೆಂದು 1,00,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳನ್ನು ಮಹಾನಗರಗಳೆಂದು ಕರೆಯಲಾಗುತ್ತದೆ. ಈಗ ಭಾರತದಲ್ಲಿ ಬಾಂಬೆ, ಕೋಲ್ಕತ್ತಾ, ಚೆನ್ನೈ, ದೆಹಲಿ, ಬೆಂಗಳೂರು, ಹೈದರಾಬಾದ್,
ಋಣೆ, ಅಹಮಾದಬಾದ್, ಲಖೋ, ಮೊದಲಾದವು ಈ ಪಟ್ಟಿಗೆ ಸೇರಿತ್ತವೆ. 2011 ಜನಗಣತಿಯ ಪ್ರಕಾರ ಭಾರತದಲ್ಲಿ ಶೇ.31.8 ಸಂಖ್ಯೆ ಜನರು ನಗರವಾಸಿಗಳಾಗಿದ್ದಾರೆ.

ಕರ್ನಾಟಕದ ನಗರೀಕರಣ (Urbanization in Karnataka):

ಕರ್ನಾಟಕವು ಭಾರತದ ನಗರೀಕರಣದಲ್ಲಿ ಏಳನೇ ಸ್ಥಾನದಲ್ಲಿದೆ. 2011ರ ಜನಗಣತಿಯ ಪ್ರಕಾರ 6.1 ಕೋಟೆಯ ಜನರಲ್ಲಿ 2.35 ಕೋಟಿಯ ಜನ (38.6%) ನಗರವಾಸಿಗಳಾಗಿದ್ದಾರೆ. ನಗರೀಕರಣ ಪ್ರಕ್ರಿಯೆಯಲ್ಲಿ ಕರ್ನಾಟಕವು 2001- 11ರ ಅವಧಿಯಲ್ಲಿ ಶೇ.4.68ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಜಿಲ್ಲಾ ಮಟ್ಟದಲ್ಲಿ ಬೆಂಗಳೂರು ಜಿಲ್ಲೆಯು ಶೇ.91 ಪ್ರಮಾಣ ನಗರೀಕರಣವಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ನಗರೀಕರಣಗೊಂಡ ಜಿಲ್ಲೆಯಾಗಿದೆ. ನಂತರ ಸಾಲಿನಲ್ಲಿ ಧಾರವಾಡ ಶೇ.57, ದಕ್ಷಿಣ ಕನ್ನಡ ಶೇ.48, ಮೈಸೂರು ಶೇ.41, ಬಳ್ಳಾರಿ ಶೇ.38ರ ಅನುಕ್ರಮದಲ್ಲಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಹೆಚ್ಚು ನಗರೀಕರಣಗೊಂಡ ಜಿಲ್ಲೆಗಳಾಗಿವೆ.

ಕಡಮೆ ನಗರೀಕರಣಗೊಂಡ ಜಿಲ್ಲೆಗಳಲ್ಲಿ ಕೊಡಗು ಶೇ.15 ನಗರೀಕರಣಗೊಂಡ ರಾಜ್ಯದಲ್ಲಿ ಅತ್ಯಂತ ಕಡಿಮೆ ನಗರೀಕರಣಗೊಂಡ ಜಿಲ್ಲೆಯಾಗಿದ್ದರೆ ನಂತರದ ಸ್ಥಾನದಲ್ಲಿ ಕೊಪ್ಪಳ ಶೇ.17, ಮಂಡ್ಯ ಶೇ.17, ಚಾಮರಾಜನಗರ ಶೇ.17 ಮತ್ತು ಯಾದಗಿರಿ ಜಿಲ್ಲೆಯು ಶೇ.19 ನಗರೀಕರಣಗೊಂಡಿವೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 32.91 ಲಕ್ಷ ಜನ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕೊಳಚೆ ನಿವಾಸಿಗಳ ಸಂಖ್ಯೆ 2001ರಿಂದ 2011ರಲ್ಲಿ 18.89 ಲಕ್ಷ ಹೆಚ್ಚಳವಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಶೇ.21.5 ಕೊಳಚೆ ಪ್ರದೇಶದ ನಿವಾಸಿಗಳಾಗಿದ್ದಾರೆ.

ಭಾರತದ ನಗರ ಸಮಸ್ಯೆಗಳು (Problems of Indian Cities): ನಗರೀಕರಣ

ಭಾರತದ ನಗರ ಸಮಸ್ಯೆಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

1) ನಗರದ ಬಡತನ (Urban Poverty):

ನಗರದ ಬಡತನವು ಕೈಗಾರೀಕರಣ ಮತ್ತು ನಗರೀಕರಣದ ಕೊಡುಗೆ. ಬಡತನ ಮತ್ತು ಜನದಟ್ಟಣೆ ನಗರದ ಸಾಮಾನ್ಯ ಲಕ್ಷಣವಾಗಿದೆ.

ನಗರದ ಅರ್ಧದಷ್ಟು ಜನ ಬಡತನದಲ್ಲಿದ್ದು ಕಡಿಮೆ ಜೀವನಮಟ್ಟದಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಡಿಮೆ ಭತ್ಯ, ಶ್ರೀಮಂತ ಪರ ಆರ್ಥಿಕ ನೀತಿಗಳು, ನಿಶ್ಚಿತ ಆದಾಯವಿಲ್ಲದಿರುವುದು ಮತ್ತು ಹಣದುಬ್ಬರ ಇತ್ಯಾದಿ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (United Nations Development Programme) ನೆರವಿನಿಂದ ಭಾರತದಲ್ಲಿ ಮೊದಲ ಬಾರಿಗೆ ನಗರ ಪ್ರದೇಶದ ಬಡತನದ ಸ್ವರೂಪದ ಬಗ್ಗೆ ವರದಿಯನ್ನು ಪ್ರಕಟಿಸಲಾಯಿತು. “ಭಾರತದ ನಗರಗಳ ಗಡಿಯಾರದ ಅರ್ಥಕೋಶ 2009 (Indian Urban Poverty Report 2009) ಅದು ನಗರ ಗರೀಬರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಬದ್ಧವಾದ ಬದಲಾವಣೆಗಳ ಆವಶ್ಯಕತೆಯನ್ನು ಹೇಳಿದೆ.”

ಈ ವರದಿಯು ನಗರದ ಬಡತನಕ್ಕೆ ಹಲವು ಕಾರಣಗಳನ್ನು ಗುರುತಿಸಿದೆ. ಮುಖ್ಯವಾಗಿ ವಲಸೆ, ಮೂಲಭೂತ ಸೌಕಯ್ಯಗಳ ಕೊರತೆ ಮತ್ತು ನಗರದ ಕೊಳಗೇರಿಗಳು ನಗರದ ಭೂಮಿಯ ಬೆಲೆಯಲ್ಲಿ ಆಗುತ್ತಿರುವ ಏರಿಕೆ, ನಗರದ ರಿಯಲ್ ಎಸ್ಟೇಟ್, ವ್ಯವಹಾರದಲ್ಲಿ ಹಣ ತೊಡಗಿಸಿರುವುದು, ನಗರದ ಆಡಳಿತದಲ್ಲಿ ಮತ್ತು ನಗರದ ಬಡಜನತೆ ಭಾಗವಹಿಸುವಿಕೆ ತೀರಾ ಕಡಿಮೆಯಾಗುತ್ತಿರುವುದು.

ನಗರದ ಬಡತನ ಸಮಸ್ಯೆಯ ನಿವಾರಣೆಗೆ ಭಾರತದ ನಗರದ ಬಡತನ ವರದಿ 2009 ಸಲಹೆಗಳನ್ನು ನೀಡಿದೆ. ಮೂಲಭೂತ ಸೌಕಯ್ಯಗಳನ್ನು ಎಲ್ಲಾ ವರ್ಗದವರಿಗೂ ಸಮಾನವಾಗಿ ಒದಗಿಸುವುದು, ಸಣ್ಣ ಮತ್ತು ಮಧ್ಯಮ ಗಾತ್ರದ ಪಟ್ಟಣಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದು. ಕೊಳಗೇರಿಗಳಿಗೆ ವಿದ್ಯುತ್‌ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಸಮರ್ಪಕ ಒಳಚರಂಡಿ ವ್ಯವಸ್ಥೆ ಒದಗಿಸುವಂತೆ ಸಲಹೆ ನೀಡಿದೆ.

ಈ ವರದಿಯು ನಗರದ ವಲಸೆ, ಭೂಮಿಯ ಬೆಲೆ, ಬಡವರ-ಶ್ರೀಮಂತರ ಅಂತರವನ್ನು ಕಡಿಮೆ ಮಾಡುವುದರ ಬಗ್ಗೆ, ನಗರದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ, ಅಸಂಘಟಿತ ಕಾರ್ಮಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿತು ಮತ್ತು ಅವರ ಜೀವನ ಸುಧಾರಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಿತು.

2) ಕೊಳಚೆ ಪ್ರದೇಶ (Slums):

ನಗರದ ಕೊಳಚೆ ಪ್ರದೇಶದ ಸಮಸ್ಯೆಯು ನಗರದ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಭಾರತ ಸರ್ಕಾರವು ನಗಾರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೊಳಚೆ ಪ್ರದೇಶವನ್ನು ಈ ಕೆಳಕಂಡಂತೆ ಅರ್ಥೈಸಿದೆ. “ಶಿಥಿಲ
ಕಟ್ಟಡಗಳು, ಜನದಟ್ಟಣೆ, ಅಸಮರ್ಪಕ ಕಟ್ಟಡಗಳು, ಕಿರಿದಾದ ಓಣಿಗಳು, ಅಸಮರ್ಪಕ ಗಾಳಿ, ಬೆಳಕು, ಶೌಚಾಲಯ ಮತ್ತು ಸ್ನಾನಗೃಹಗಳ ಅಭಾವ, ಸಮುದಾಯ ಸೌಕರ್ಯಗಳ ಕೊರತೆ ಅಥವಾ ಇವುಗಳ ಯಾವುದೇ ಒಂದು ಲಕ್ಷಣದ ಪ್ರದೇಶವೇ ಕೊಳಚೆ ಪ್ರದೇಶ.”

ಕೊಳಚೆ ಪ್ರದೇಶಗಳನ್ನು ಕೆಳ ವರ್ಗದ ನೆರೆಹೊರೆ, ಕಡಿಮೆ ಆದಾಯದ ಪದೇಶಗಳು, ಹಿಂದುಳಿದ ಪ್ರದೇಶ, ಅನಧಿಕೃತ ಪ್ರದೇಶ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತೇವೆ. ನಗರದ ಬಡ ಮತ್ತು ವಲಸೆ ಜನ, ಕೂಲಿ ಕೆಲಸಗಳಿಗಾಗಿ ಬಂದವರೂ, ಬಡ ಕೈಗಾರಿಕಾ ಕಾರ್ಮಿಕರು, ದಿನಗೂಲಿ ನೌಕರರು, ಸಣ್ಣ ಅಂಗಡಿ ಮಾಲೀಕರು, ಚಿಂದಿ ಆಯುವವರು, ತರಕಾರಿ ಮಾರುವವರು ಇಂಥಹ ಹಲವು ವರ್ಗದ ಜನರಿಗೆ ಅದು ವಾಸ ಸ್ಥಳವಾಗಿದೆ.

ಕೊಳಚೆ ಪ್ರದೇಶಗಳ ಉಗಮಕ್ಕೆ ಕಾರಣಗಳು (Emergence of Slums):

ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆಯು, ನವದೆಹಲಿ (The National Institute of Urban Affairs New Delhi) ಕೊಳಗೇರಿಗಳ ಉಗಮಕ್ಕೆ ಮೂರು ಅಂಶಗಳು ಕಾರಣವಾಗಿವೆ ಎಂದು ಅಭಿಪ್ರಾಯಪಟಟಿದೆ.

1) ನಗರದ ಜೀವನ ಶೈಲಿ ಮತ್ತು ನಗರದಲ್ಲಿ ಉದ್ಯೋಗಗಳ ಲಭ್ಯತೆ,

2) ವಸತಿಯನ್ನು ಬೇಡಿಕೆಗೆ ಅನುಸಾರವಾಗಿ ಪೂರೈಸಲಾಗದ ಸ್ಥಿತಿ.

3) ನಗರದ ಪ್ರಸ್ತುತ ಭೂ ನಿಯಮಗಳು ಬಡ ಜನರು ವಸತಿ ಭೂಮಿಯನ್ನು ಖರೀದಿಸಲಾಗದ ಸ್ಥಿತಿ.

ಈ ಸಂಸ್ಥೆಯು ಗಮನಿಸಿರುವ ಮತ್ತೊಂದು ಅಂಶವೆಂದರೆ ನಗರದ ಬಡ ಜನರು ಬೇರೆ ಅವಕಾಶವಿಲ್ಲದೆ ಎಲ್ಲಿ ಖಾಲಿ ಜಾಗ ಕಂಡು ಬರುವುದೋ ಅಲ್ಲಿ ತಮ್ಮ ವಾಸಸ್ಥಾನವನ್ನು ಮಾಡಿಕೊಳ್ಳುವರು. ಹೀಗೆ ಕೆಲವೊಮ್ಮೆ ಕೊಳಚೆ ಪ್ರದೇಶಗಳು ನಗರದ ಹಳೆಯ ಪರದೇಶಗಳಾಗಿರಬಹುದು ಅಥವಾ ಹಳ್ಳಿ ನಗರದ ಭಾಗವಾಗಿ ಹೊಸ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗಬಹುದು.

ಕೊಳಚೆ ಪ್ರದೇಶದ ಸಾಮಾನ್ಯ ಲಕ್ಷಣಗಳು (Characteristics of Slums): ನಗರೀಕರಣ

ಕೊಳಚೆ ಪ್ರದೇಶಗಳ ಭೌತಿಕ ಮತ್ತು ಸಾಮಾನ್ಯ ಲಕ್ಷಣಗಳು ಈ ಕೆಳಕಂಡಂತಿವೆ. ಅವುಗಳೆಂದರೆ,

(1) ಶಿಥಿಲ ಮತ್ತು ವಾಸಕ್ಕೆ ಯೋಗ್ಯವಲ್ಲದ ಕಟ್ಟಡಗಳು (Dilapidiated & Poor Housing): ನಗರೀಕರಣ

ಕೊಳಚೆ ಪ್ರದೇಶಗಳ ಮನೆಗಳು ಶಿಥಿಲಾವಸ್ಥೆಯಿಂದ ಕೂಡಿದ್ದು ತಗಡು, ತೆಂಗಿನಗರಿ, ಪ್ಲಾಸ್ಟಿಕ್ ಕವರ್‌ಗಳ ಮೇಲ್ಬಾವಣಿ ಹೊಂದಿದ್ದು ಸಾಮಾನ್ಯವಾಗಿ ಅನಧಿಕೃತ ಪ್ರದೇಶಗಳಲ್ಲಿ ನಿರ್ಮಾಣವಾಗಿರುತ್ತವೆ.

(2) ಅತಿಯಾದ ಜನಸಾಂದ್ರತೆ ಮತ್ತು ಮನೆಗಳು (High density of Population & Housing): ನಗರೀಕರಣ

ಇದು ಅತಿ ಜನದಟ್ಟಣೆಗೆ ಮತ್ತು ಉಸಿರು ಕಟ್ಟುವ ವಾತಾವರಣವನ್ನು ಸೃಷ್ಟಿಸುತ್ತದೆ. ಒಂದು ಕೊಠಡಿಯ ಮನೆಯನ್ನು ತಮ್ಮ ಎಲ್ಲಾ ಅವಶ್ಯಕತೆಗಳ ಪೂರೈಕೆಗೆ ಬಳಸುತ್ತಾರೆ. ಉದಾ: ಮುಂಬೈ ಮತ್ತು ಇತರೆ ಮಹಾನಗರಗಳಲ್ಲಿ 100ರಿಂದ 150 ಚದರ ಅಡಿ ಮನೆಗಳಲ್ಲಿ ಹತ್ತಕ್ಕೂ ಹೆಚ್ಚಿನ ಜನ ವಾಸಿಸುತ್ತಾರೆ.

(3) ಮೂಲಭೂತ ಸೌಕಯ್ಯಗಳ ಕೊರತೆ (Lack of Public Utilities and Facilities): ನಗರೀಕರಣ

ಅಸಮರ್ಪಕ ಒಳಚರಂಡಿ ವಯವಸ್ಥೆ, ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆ, ಆರೋಗ್ಯ ಕೇಂದ್ರಗಳು, ಶೌಚಾಲಯಗಳು, ಮಕ್ಕಳ ಆಟದ ಮೈದಾನಗಳು ಅತಿ ವಿರಳವಾಗಿ ಕಂಡು ಬರುತ್ತವೆ.

(4) ಸಾಮಾಜಿಕ ಪ್ರತ್ಯೇಕತೆ (Apathy and Social Isolation): ನಗರೀಕರಣ

ಕೊಳಚೆ ಪ್ರದೇಶಗಳು ನಗರ ಸಮೀಪದ ಭಾಗವೇ ಆಗಿದ್ದರೂ ನಗರದ ಜನಸಂಖ್ಯೆಯಿಂದ ಅವು ಪ್ರತ್ಯೇಕವಾಗಿದೆ. ಈ ಕಾರಣಗಳಿಂದಾಗಿ ಕೊಳಚೆ ಪ್ರದೇಶದ ನಿವಾಸಿಗಳು ತಮ್ಮ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳುವುದು ಅಸಾಧ್ಯವಾಗಿದೆ.

3) ನಗರ ವಸತಿ ಸಮಸ್ಯೆ (Problems of Urban Housing & Slums): ನಗರೀಕರಣ

ನಗರದ ಹೆಚ್ಚಿನ ಜನ ಒಂದು ಕೊಠಡಿಯ ಮನೆಯಲ್ಲಿ ಅಥವಾ ಹರಕಲು ಗುಡಿಸಲು ಅಥವಾ ಬೀದಿಬದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ದುರಂತವೆಂದರೆ, ಅಗತ್ಯ ನಾಗರೀಕ ಸೇವೆಗಳಾದ ನೀರಿನ ಪೂರೈಕೆ, ಈ ಜನರ ಚರಂಡಿ, ವಿದ್ಯುತ್, ರಸ್ತೆ ಮತ್ತು ಶೌಚಾಲಯಗಳು ಇರುವುದಿಲ್ಲ. ಗ್ರಾಮಗಳಿಂದ ವಲಸೆ ಬರುವ ಅಧಿಕ ಜನ ಕಡಿಮೆ ನೈಮಣ್ಯತೆ ಇರುತ್ತದೆ. ಅವರು ವ್ಯಾಪಾರ.
ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ದುಡಿಯುವರು. ನೈಋಣ್ಯತೆ ಇಲ್ಲದ ವೃತ್ತಿಗಳನ್ನು ಮಾಡುತ್ತಾರೆ.

ಅವರು ವಾಸಿಸುವ ಒಂದು ಕೊಠಡಿಯಲ್ಲಿ ಅವರ ಎಲ್ಲಾ ಅಗತ್ಯಗಳು ಪೂರೈಕೆಯಾಗಬೇಕು. ಅಡಿಗೆ, ವಾಸ, ಮಲಗುವುದು ಇತ್ಯಾದಿ ಸಹಜವಾಗಿ ಆ ಪ್ರದೇಶವನ್ನು ಶುಭ್ರವಾಗಿಡಲು ಕಷ್ಟ. ಅದರಲ್ಲಿ ಮಳೆಗಾಲದಲ್ಲಿ ಇಲ್ಲಿ ವಾಸಿಸುವುದು ಕಷ್ಟವಾಗುವುದು. ಮೇಲೆ ತಿಳಿಸಿದ ಎಲ್ಲಾ ಪರಿಸ್ಥಿತಿಗಳೂ ಮುಂಬೈನ ಚಾವಲ್ಸ್ ಕಾನ್‌ಪುರದ ಅಹಾತಾಸ್, ಕೋಲ್ಕತ್ತಾದ ಬಸ್ಲಿಗಳಲ್ಲಿ, ಚೆನ್ನೈನ ಚೇರಿಗಳಲ್ಲಿ ಅಲ್ಲದೆ ಗಣಿಗಾರಿಕೆ ಮತ್ತು ಪ್ಲಾಂಟೇಶನ್‌ಗಳಲ್ಲಿ ಈ ಸ್ಥಿತಿ ಸಾಮಾನ್ಯವಾಗಿವೆ.

ಇಲ್ಲಿನ ಮನೆಗಳು ಸಾಮಾನ್ಯವಾಗಿ ಮಣ್ಣು ಅಥವಾ ಇಟ್ಟಿಗೆಯ ಗೋಡೆಗಳಾಗಿದ್ದು, ತಗಡಿನ ಹೊದಿಕೆ ಅಥವಾ ಬಿದಿರಿನ ಹೊದಿಕೆಯನ್ನು ಹೊಂದಿರುತ್ತವೆ. ರಸ್ತೆಗಳು ಕಿರಿದಾಗಿದ್ದು, ಮನೆಗಳು ಒಂದರ ಪಕ್ಕ ಮತ್ತೊಂದು ನಿರ್ಮಾಣವಾಗಿರುವುದು ಇವು ಯಾವುದೇ ಮೂಲ ಸೌಕಯ್ಯಗಳನ್ನು ಹೊಂದಿರುವುದಿಲ್ಲ.

4) ಶುಚಿತ್ವ ಮತ್ತು ಮಾಲಿನ್ಯ (Sanitation and Pollution): ನಗರೀಕರಣ

ಶುಚಿತ್ವ ಮತ್ತು ಸಮಸ್ಯೆಯು ಭ್ರಷ್ಟ ನಗರ ಆಡಳಿತ ಮತ್ತು ಅಸಮರ್ಥ ಅಧಿಕಾರಿಗಳ ಕೊಡುಗೆ. ಯೂನಿಸೆಫ್ (UNICEF) ವರದಿಯ ಪ್ರಕಾರ ಭಾರತದಲ್ಲಿ ಲಕ್ಷಾಂತರ ನಗರದ ಮಕ್ಕಳು ಸಾವನ್ನಪ್ಪುತ್ತಿದ್ದು ಕಾಲರ, ಸಿಡುಬು, ಮಲೇರಿಯಾ, ಗಂಟಲುಮ್ಮಾಗಿ ಹೊಗೆಗಳು ಇದಕ್ಕೆ ಕಾರಣವಾಗಿದೆ.

5) ಸಂಚಾರ ದಟ್ಟನೆಯ ಸಮಸ್ಯೆ: ನಗರೀಕರಣ

ಭಾರತದ ನಗರಗಳಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿದ್ದು ನಗರದ ಹೆಚ್ಚಿನ ಜನ ತಮ್ಮ ದೈನಂದಿನ ಓಡಾಟಕ್ಕೆ ಬಸ್ಸುಗಳು ಮತ್ತು ಇತರೆ ವಾಹನಗಳನ್ನು ಬಳಸುತ್ತಾರೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರು ನಗರಗಳಲ್ಲಿ ಬಸ್ಸುಗಳ ಸಂಖ್ಯೆ ಪ್ರಮಾಣಕ್ಕನುಗುಣವಾಗಿಲ್ಲ. ಪ್ರಯಾಣಿಕರು ಒಂದರಿಂದ ಎರಡು ಗಂಟೆಗಳ ಕಾಲ ಬಸ್ಸುಗಳಿಗಾಗಿ ಕಾಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಆದಾಯದಿಂದಾಗಿ ಪ್ರಯಾಣಿಕರು ಅಗ್ಗದ ಮನೆಯನ್ನು ಬಾಡಿಗೆ ಪಡೆದು ಬಹುದೂರದಲ್ಲಿ ವಾಸವಾಗಿರುವುದು. ನಗರ ವಾಹನ ದಟ್ಟಣೆಯಿಂದಾಗಿ ಹೆಚ್ಚಿನ ಜನ ದ್ವಿಚಕ್ರ ವಾಹನ ಬಳಸುವುದು ಸಾಮಾನ್ಯವಾಗಿದೆ.

6) ನೀರಿನ ಪೂರೈಕೆ ಮತ್ತು ಚರಂಡಿ ವ್ಯವಸ್ಥೆ: ನಗರೀಕರಣ

ಭಾರತದ ಯಾವುದೇ ನಗರಗಳು ದಿನದ 24 ಗಂಟೆಯು ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು, ಹೈದರಾಬಾದ್, ರಾಜ್‌ಕೋಟ್, ಆಜೀ‌, ಉದಯಪುರ, ಜೈಪುರ ಇನ್ನೂ ಮೊದಲಾದ ನಗರಗಳಲ್ಲಿ ದಿನವೊಂದಕ್ಕೆ ಕೇವಲ ಒಂದು ಗಂಟೆ ಮಾತ್ರ ನೀರನ್ನು ಪೂರೈಸಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಇದು ಮತ್ತಷ್ಟು ತೊಂದರೆಯಾಗುತ್ತಿದೆ. ನೀರಿನ ಪೂರೈಕೆಯು ದುಬಾರಿಯಾಗಿದ್ದು 200-300 ಕಿ.ಮೀ. ದೂರದಿಂದ ನೀರನ್ನು ಪೂರೈಸಬೇಕಾಗಿದೆ.

ಕುಡಿಯುವ ನೀರಿನ ಜೊತೆ ಒಳಚರಂಡಿ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ. ಭಾರತದಲ್ಲಿ ಯಾವ ನಗರದಲ್ಲೂ ಯೋಜನಾಬದ್ದವಾದ ಚರಂಡಿ ವ್ಯವಸ್ಥೆಯು ಕಂಡುಬರುತ್ತಿಲ್ಲ. ನಗರದ ಸುತ್ತ ಕೊಳಚೆ ನೀರಿನಿಂದ ಬೃಹತ್ ಗಾತ್ರದ ಕೆರೆಗಳನ್ನು ಎಲ್ಲೆಡೆ ನೋಡಬಹುದು.

ನಗರದ ಚರಂಡಿ ನೀರು ಮತ್ತು ಕೈಗಾರಿಕೆಗಳು ಹೊರ ಸೂಸುವ ನೀರನ್ನು ಶುದ್ದೀಕರಿಸದೆ ಹತ್ತಿರದ ನದಿಗಳಿಗೆ ಬಿಡಲಾಗುತ್ತಿದೆ. ನಗರದ ಕೈಗಾರಿಕೆಗಳು ಪರಿಸರವನ್ನು ಅಶುದ್ಧಗೊಳಿಸುತ್ತವೆ. ವಿಷಪೂರಿತ ಹೊಗೆಗಳಾದ ಇಂಗಾಲದ ಡೈಆಕ್ಸೆಡ್, ಸಲ್ಫರ್ ಡೈ ಆಕ್ಸೆಡ್, ಕಾರ್ಬನ್ ಮಿಶ್ರಣಗಳು, ಗಂಧಕದ ಮಿಶ್ರಣಗಳು, ಹಲವು ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತಿವೆ.

7) ಕೈಗಾರಿಕಾ ಅಪಘಾತಗಳು ಮತ್ತು ರೋಗಗಳು (Industrial Accident and Sickness): ನಗರೀಕರಣ

ಕೈಗಾರಿಕಾ ಅಪಘಾತಗಳು ಕೈಗಾರೀಕರಣದ ಮತ್ತೊಂದು ಅಪಾಯ. ಉದಾಹರಣೆಗೆ ಭೂಪಾಲ್ ಅನಿಲ ದುರಂತವು ಕೈಗಾರಿಕಾ ದುರಂತಗಳ ಮೈಲಿಗಲ್ಲು. 1984 ಡಿಸೆಂಬರ್ 2ರಂದು ಭೂಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿ (Union Carbide Company)ಯಲ್ಲಿ ವಿಷಪೂರಿತ ಅನಿಲ ಮೀಥೇ‌ ಐಸೋಸಿಯಾನೇಟ್‌ (Methyl Isocyanate) ಸೋರುವಿಕೆಯಿಂದ 16,000ದಿಂದ 30,000 ಜನ ಸಾವಿಗೀಡಾದರು ಮತ್ತು ಲಕ್ಷಾಂತರ ಜನ ತೀವ್ರ ಅನಾರೋಗ್ಯ ಪೀಡಿತರಾದರು.

ನಗರದ ಸಮಸ್ಯೆಗಳಿಗೆ ಪರಿಹಾರಗಳು (Solution to Urban Problems):

1) ನಗರಗಳ ವ್ಯವಸ್ಥಿತ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ 2) ನಗರದ ವಲಸೆಯನ್ನು ತಡೆಗಟ್ಟಲು, ಸ್ಥಳೀಯ ಯೋಜನೆಗಳ ಮೂಲಕ ತಮ್ಮ ಸ್ವಂತ ಊರುಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು

3) ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಪ್ರೋತ್ಸಾಹಿಸುವುದು. ಇದರಿಂದಾಗಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು

4) ನಗರ ಸಭೆಗಳು ಅಭಿವೃದ್ಧಿಗೆ ಅಗತ್ಯವಾದ ತಮ್ಮದೇ ಆದ ಹಣಕಾಸಿನ ಮೂಲವನ್ನು ಹುಡುಕಿಕೊಳ್ಳಬೇಕು

5) ವ್ಯವಸ್ಥಿತವಾದ ವಸತಿ ಯೋಜನೆಯನ್ನು ರೂಪಿಸಿ ಜೊತೆಗೆ ಖಾಸಗಿ

ಕಂಪನಿಗಳು ತಮ್ಮ ಹೂಡಿಕೆಯನ್ನು ವಸತಿ ಕ್ಷೇತ್ರದಲ್ಲಿ ಹುಡುಕುವಂತೆ

ಪ್ರೋತ್ಸಾಹಿಸುವುದು

6) ಬಡ ಮತ್ತು ಕಡಿಮೆ ಆದಾಯದ ಮನೆ ನಿರ್ಮಾಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸುವುದು. ಇದಕ್ಕಾಗಿ ವಿಶೇಷ ತಂತ್ರಜ್ಞಾನವನ್ನು ಬಳಸಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವುದು

7) ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಖಾಸಗಿ ಸಾರಿಗೆಯನ್ನು ಪ್ರೋತ್ಸಾಹಿಸುವುದು

8) ನಗರದ ಚಟುವಟಿಕೆಗಳಲ್ಲಿ ಸಮುದಾಯದ ಜನ ಬಾಗಿಯಾಗುವಂತೆ ಪ್ರೋತ್ಸಾಹಿಸುವುದು. ನಗರ ಸಭೆಯ ಚಟುವಟಿಕೆಗಳನ್ನು ರಚನಾತ್ಮಕವಾಗಿ ವಿಕೇಂದ್ರೀಕರಣಗೊಳಿಸುವುದು, ನಿಯಂತ್ರಿತ ಉದಾರೀಕರಣ, ಸರ್ಕಾರಿ ಅಧಿಕಾರಿ ವರ್ಗಗಳು ಮತ್ತು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದಾಗಿ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.

ನಗರ ನೈರ್ಮಲ್ಯ – ಸಾಧಕ ಬಾಧಕಗಳು: ನಗರೀಕರಣ

ನಿರ್ಮಲೀಕರಣವು ಭಾರತದ ಪ್ರಮುಖ ಅಭಿವೃದ್ಧಿಯ ಸವಾಲುಗಳಲ್ಲಿ ಒಂದು. ಭಾರತದ ನಗರ ಜನಸಂಖ್ಯೆಯ ನಾಲ್ಕನೇ ಒಂದರಷ್ಟು ಜನರಿಗೆ ಸುರಕ್ಷಿತ ಶೌಚ ವ್ಯವಸ್ಥೆ, ಲಭ್ಯವಿಲ್ಲ. ನಗರ ವಾಸಿಗಳಲ್ಲಿ ಕೇವಲ 30-40% ಜನರಿಗೆ ಮಾತ್ರ ಒಳಚರಂಡಿ ವ್ಯವಸ್ಥೆ ಮತ್ತು ಬಳಸಿದ ನೀರಿನ ಪುನರ್ ಬಳಕೆಯ ವ್ಯವಸ್ಥೆ ಲಭ್ಯವಿದೆ. ಬಹುತೇಕ ನಗರಗಳಲ್ಲಿ ಬಯಲು ಶೌಚಾಲಯಗಳ ಬಳಕೆಯು ವ್ಯಾಪಕವಾಗಿದೆ ಮತ್ತು ಇದು ಪರಿಸರ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಕೇವಲ ಆರ್ಥಿಕ ಸೂಚ್ಯಾಂಕಗಳು ಮಾತ್ರವಲ್ಲದೆ ಮಾನವ ಅಭಿವೃದ್ಧಿ ಸೂಚ್ಯಾಂಕವೂ ಅವಶ್ಯ ಎಂಬುದು ಗೊತ್ತಿರುವ ಸಂಗತಿ. ನಮ್ಮ ನಿರಾಶಾದಾಯಕ ಸಾಮಾಜಿಕ ಸೂಚ್ಯಾಂಕಗಳನನು ಗಮನಿಸಿದರೆ ಚೀನಾದ ನಂತರದ ಮಹಾನ್ ಶಕ್ತಿ ಎಂದು ಬಿಂಬಿಸಲ್ಪಟ್ಟಿರುವ ಭಾರತದ ವಿಷಯದಲ್ಲಿ ಇದು ಅನ್ವಯಿಸುವುದೇ ಇಲ್ಲವೆನಿಸುತ್ತದೆ.

ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ ಬಹಳಷ್ಟು ಜನರಿಗೆ ಸುಧಾರಿತ ಶೌಚಾಲಯದ ಲಭ್ಯತೆ ಇರದಿದ್ದರೂ ಮೊಬೈಲ್ ಫೋನ್ ಬಹು ಸುಲಭವಾಗಿ ಕೈಗೆಟುಕುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 626 ಮಿಲಿಯನ್ ಜನರು ಬಯಲು ಶೌಚಾಲಯವನ್ನು ಬಳಸುತ್ತಾರೆ. ಅಂದರೆ ಜಗತ್ತಿನಲ್ಲಿ ಬಯಲು ಶೌಚಾಲಯ ಬಳಸುವವರಲ್ಲಿ ಶೇ.60 ಜನರು ಭಾರತದಲ್ಲಿಯೇ ಇದ್ದಾರೆ. ಜೊತೆಗೆ ಭಾರತದ ನಿರ್ಮಲೀಕರಣದ ಕೊರತೆಯ ಒಟ್ಟಾರೆ ವಾರ್ಷಿಕ ಆರ್ಥಿಕ ಪರಿಣಾಮವನ್ನು ರೂ.2.44 ಟ್ರಿಲಿಯನ್ (53.8 ಬಿಲಿಯನ್ ಅಮೆರಿಕನ್ ಡಾಲರ್) ಎಂದು ಅಂದಾಜಿಸಲಾಗಿದೆ.+

ಇದು ನಮ್ಮ ದೇಶದ 2006ರ ಜಿಡಿಪಿ ಯ 6.4%ಕ್ಕೆ ಸಮ. (ನೀರು ಮತ್ತು ನಿರ್ಮಲೀಕರಣ ಯೋಜನೆ-2007) ಕೇಂದ್ರ ಕುಡಿಯುವ ನೀರು ಮತ್ತು ನಿರ್ಮಲೀಕರಣ ಇಲಾಖೆಯು 2020ರ ವೇಳೆಗೆ ಬಯಲು ಶೌಚಾಲಯ ಮುಕ್ತ ಗುರಿ ತಲುಪಲು ಬದ್ದವಾಗಿದೆಯಾದರೂ ಇದು ನಿಜಕ್ಕೂ ಸಾಧ್ಯವಾಗುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 2010ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಹಕ್ಕನ್ನು ಮೂಲಭೂತ ಹಕ್ಕಾಗಿ ಗುರುತಿಸಿರುವುದು ಈ ಕ್ಷೇತ್ರಕ್ಕೆ ಶಿಕ್ಷಣ, ಆಹಾರ ಭದ್ರತೆ ಮತ್ತು ಆರೋಗ್ಯದಂತಹ ಇತರ ಮೂಲಭೂತ ಹಕ್ಕೊತ್ತಾಯದ ಚಳುವಳಿಗಳ ನಡುವೆ ಸ್ಥಾನ ದೊರಕಿಸುವಲ್ಲಿ ಪ್ರೇರಕಶಕ್ತಿಯಾಗಿ ಕೆಲಸ ಮಾಡಿದೆ.

ಸ್ವಚ್ಛ ಕುಡಿಯುವ ನೀರು ಮತ್ತು ಸುಧಾರಿತ ಶೌಚವ್ಯವಸ್ಥೆ ಇವೆರಡು ಬಡತನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ಎಲ್ಲ ಮೂಲಭೂತ ಮಾನವ ಹಕ್ಕುಗಳ ಸಾಧನೆಗು ತಳಪಾಯ ಒದಗಿಸುತ್ತದೆ. (ಯುಎನ್‌ಡಿಪಿ, 2011) ಇದರ ಜೊತೆಗೆ ಸಾಕಷ್ಟು ಪ್ರಮಾಣದ ಹಣಕಾಸನ್ನು ಒದಗಿಸುವುದು ಸಹ ಕುಡಿಯುವ ನೀರು ಮತ್ತು ನಿರ್ಮಲೀಕರಣ ಯೋಜನೆಗಳ ಯಶಸ್ವೀ ಅನುಷ್ಠಾನ ಅತ್ಯವಶ್ಯಕ.

ವಿಶ್ವಸಂಸ್ಥೆಯ ‘ಕುಡಿಯುವ ನೀರು ಮತ್ತು ನೈರ್ಮಲ್ಯದ ಮಾನವ ಹಕ್ಕು’ ಕುರಿತ ವರದಿಯ ಪ್ರಕಾರ ಸಾಕಷ್ಟು ಪ್ರಮಾಣದ ಹಣಕಾಸು ಒದಗಿಸುವುದು ಎಂಬುದು ಕುಡಿಯುವ ನೀರು ಮತ್ತು ನಿರ್ಮಲೀಕರಣ ಸೌಲಭ್ಯ ಒದಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಯೋಜನೆಯ ನಿಯಂತ್ರಕ ಕ್ರಮಗಳ ವೆಚ್ಚ, ಸಂಬಂಧಿಸಿದ ಸಂಸ್ಥೆಗಳ ಬಲವರ್ಧನೆ ಹಾಗೂ ಇಡೀ ಯೋಜನೆಯ ಯಶಸ್ಸಿಗೆ ಸಂಬಂಧಿಸಿದ್ದಾಗಿರುತ್ತದೆ. (ಯುಎನ್ ಮತ್ತು ಮಾನವ ಹಕ್ಕುಗಳ ಆಯೋಗ- 2011).

ಭಾರತದಲ್ಲಿ ನಗರ ನೈರ್ಮಲ್ಯದ ಸ್ಥಿತಿ ಗತಿ: ನಗರೀಕರಣ

ಮೊದಲನೇ ಪಂಚವಾರ್ಷಿಕ ಯೋಜನೆ ಜಾರಿಯಾದಂದಿನಿಂದಲೂ ಕುಡಿಯುವ ನೀರು ಮತ್ತು ನಿರ್ಮಲೀಕರಣದ ಯೋಜನೆಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿನ ನಿರ್ಮಲೀಕರಣದ ಜವಾಬ್ದಾರಿ ರಾಜ್ಯ ಸರ್ಕಾರದ್ದಾದರೆ, ನಗರಗಳಲ್ಲಿ ಮುನಿಸಿಪಾಲಿಟಿ ಮತ್ತು ರಾಜ್ಯ ಸರ್ಕಾರಗಳೆರಡೂ ಇದಕ್ಕೆ ಹೊಣೆಗಾರರು. “ನಮ್ಮ ಕೇಂದ್ರ ಸರ್ಕಾರವು ಈ ಸಮಯದಲ್ಲಿ ಉದಾರ ಸಹಾಯ ಮತ್ತು ಅನುಮೋದನೆಗಳನ್ನು ನೀಡುತ್ತದೆ” ಇತರ ಕ್ಷೇತ್ರಗಳ ತುಲನೆಯಲ್ಲಿ ಈ ಕ್ಷೇತ್ರಕ್ಕೆ ಸ್ವತಂತ್ರ ಸ್ಥಾನವೇನು ಇಲ್ಲ.

ಈ ಕ್ಷೇತ್ರದ ಮೇಲಣ ಸರ್ಕಾರದ ವೆಚ್ಚ 1%ಕ್ಕಿಂತ ಕಡಿಮೆ ಎಂಬುದನ್ನು ಗಮನಿಸಿದರೆ ಈ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ. 2008ರಲ್ಲಿ 0.57% ರಷ್ಟಿದ್ದ ಈ ವೆಚ್ಚವು 2010ರಲ್ಲಿ 0.45ಕ್ಕೆ ಇಳಿದಿರುವುದು ಈ ಕ್ಷೇತ್ರಕ್ಕೆ ಒದಗಿಸುವ ಹಣಕಾಸಿನ ತೀವ್ರ ಕೊರತೆಯನ್ನು ತೋರಿಸುತ್ತದೆ. (ವಾಟರ್ ಏಡ್, 2001).

ಹಾಗಾಗಿ ನಿರ್ಮಲೀಕರಣವು ಭಾರತದ ಪ್ರಮುಖ ಅಭಿವೃದ್ಧಿಯ ಸವಾಲುಗಳಲ್ಲಿ ಒಂದು. ಭಾರತದ ನಗರ ಜನಸಂಖ್ಯೆಯ ನಾಲ್ಕನೇ ಒಂದರಷ್ಟು ಜನರಿಗೆ ಸುರಕ್ಷಿತ ಶೌಚವ್ಯವಸ್ಥೆ ಲಭ್ಯವಿಲ್ಲ. ನಗರವಾಸಿಗಳಲ್ಲಿ ಕೇವಲ 30-40% ಜನರಿಗೆ ಮಾತ್ರ ಒಳಚರಂಡಿ ವ್ಯವಸ್ಥೆ ಮತ್ತು ಬಳಸಿದ ನೀರಿನ ಮುನರ್‌ಬಳಕೆಯ ವ್ಯವಸ್ಥೆ ಲಭ್ಯವಿದೆ. 2001ರಲ್ಲಿ 27.8ರಷ್ಟಿದ್ದ ನಗರೀಕರಣದ ಮಟ್ಟವು 2011ರ ವೇಳೆಗೆ 31.2ರಷ್ಟಾಗಿದೆ. (2011ರ ಜನಗಣತಿ). ಆದರೆ ಬಹುತೇಕ ನಗರಗಳಲ್ಲಿ ಬಯಲು ಶೌಚಾಲಯಗಳ ಬಳಕೆಯು ವ್ಯಾಪಕವಾಗಿದೆ ಮತ್ತು ಇದು ಪರಿಸರ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

ನಗರ ನಿರ್ಮಲೀಕರಣದ ಯೋಜನೆಗಳು:

ನಗರ ನಿರ್ಮಲೀಕರಣದ ಸಂಪೂರ್ಣ ಚಿತ್ರಣ ಸಿಗಬೇಕಿದ್ದರೆ, ಈ ಕುರಿತ ಕೇಂದ್ರ ಸರ್ಕಾರ ಮಟ್ಟದ ಯೋಜನೆಗಳ ಸೂಕ್ಷ್ಮ ಅಧ್ಯಯನ ಅವಶ್ಯಕ. ಇಂತಹ ಕೆಲವು ಪ್ರಮುಖ ಯೋಜನೆಗಳು ಇಂತಿವೆ,

ಜವಹಾರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (JNNURM)

ಅ) ನಗರವಾಸಿಗಳಿಗೆ ಮೂಲ ಸೌಕರ್ಯ (BSUP)

ಆ) ರಾಜೀವ ಆವಾಸ್‌ ಯೋಜನೆ (RAY)

ಇ) ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆ

– ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿ, 2008

– ರಾಷ್ಟ್ರೀಯ ನಗರವಾಸಿ ಮತ್ತು ವಸತಿ ಯೋಜನೆ, 2007

ಕಡಿಮೆ ವೆಚ್ಚದ ಸಮಗ್ರ ಶೌಚವ್ಯವಸ್ಥೆ ಯೋಜನೆ (ILCS) ನಗರಾಭಿವೃದ್ಧಿ ಸಚಿವಾಲಯದ ಕೆಳಗೆ ಬರುವ JNNURM ಯೋಜನೆಯು ನಗರದಲ್ಲಿ ನೀರು ಮತ್ತು ಶೌಚ ವ್ಯವಸ್ಥೆ ಒದಗಿಸುವುದಲ್ಲದೆ,

ಅ) ನಗರಗಳ ಆರ್ಥಿಕ ಹಾಗೂ ಸಾಮಾಜಿಕ ಮೂಲಸೌಕರ್ಯದ ಅಭಿವೃದ್ಧಿ

ಆ) ನಗರದ ಬಡಜನರಿಗೆ ಕಡಿಮೆ ದರದಲ್ಲಿ ವಸತಿಯ ಜೊತೆಗೆ ಇತರ ಮೂಲ ಸೌಕರ್ಯಗಳನ್ನು ಒದಗಿಸುವುದು

ಇ) 74ನೇ ಸಾಂವಿಧಾನಿಕ ತಿದ್ದುಪಡಿಯ ಅನ್ವಯ ಮುನಿಸಿಪಾಲಿಟಿ ಮತ್ತು ಅದರ ಕಾರ್ಯವೈಖರಿಯನ್ನು ಬಲಗೊಳಿಸುವ ಗುರಿಯನ್ನು ಸಹ ಹೊಂದಿದೆ.

ನಗರದ ಬಡಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಮುಖ್ಯವಾದದ್ದು ನೀರು ಸರಬರಾಜು ಮತ್ತು ಶೌಚ ವ್ಯವಸ್ಥೆ ಒದಗಿಸುವುದಾಗಿದೆ. ಇದು ಮುಖ್ಯವಾಗಿ ಸ್ಥಳೀಯ ಆಡಳಿತದ ಕಾರ್ಯಕ್ಷಮತೆಯ ಮೇಲೆ ಆಧಾರಿತವಾಗಿದೆ. JNNURM ಯೋಜನೆಯಡಿಯಲ್ಲಿ ಬರುವ ನಗರಗಳು ಅದರ ಉದ್ದೇಶಗಳಿಗನುಗುಣವಾಗಿ ನಗರಾಭಿವೃದ್ಧಿ ಯೋಜನೆಗಳನ್ನು (CDPs) ರೂಪಿಸಬೇಕು, JNNURMನ ಅಡಿ ಎಲ್ಲ ನಗರಗಳಿಗೂ ಯೋಜನೆಯನ್ನು ರೂಪಿಸಿದ್ದರೂ, ಇದರ ಮುಖ್ಯ ಲೋಪವೆಂದರೆ ಸಮಾಜದ ಎಲ್ಲ ವರ್ಗಗಳ ಜೊತೆಗೆ ಸಮಾಲೋಚಿಸದಿರುವುದು. ಈ ಲೋಪಕ್ಕೆ ಮೂಲ ಕಾರಣ ಸ್ಥಳೀಯ ಆಡಳಿತ ಸಂಸ್ಥೆಗಳ (ULB) ಅದಕ್ಷತೆ, 74ನೇ ಸಾಂವಿಧಾನಿಕ ತಿದ್ದಪಡಿಯ ಅನ್ವಯ JNNURM ಯೋಜನೆಯ ಹಣಕಾಸಿನ ಹಂಚಿಕೆ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಈ ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿಗೆ ಒಳಪಟ್ಟಿದೆ.

JNNURM ಅಡಿ ಬರುವ ನಗರವಾಸಿಗಳಿಗೆ ಮೂಲ ಸೌಕರ್ಯ (BSUP) ಯೋಜನೆಯು ನಗರದ ಬಡಜನರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದಕ್ಕೆ ಒತ್ತು ನೀಡುತ್ತದೆ. ಸಂಪನ್ಮೂಲದ ಸೃಷ್ಟಿ ಮತ್ತು ಸಂಪನ್ಮೂಲ ನಿರ್ವಹಣೆಯ ನಡುವೆ ಸಶಕ್ತ ಸಂಬಂಧವನ್ನು ರೂಪಿಸುವುದರ ಮೂಲಕ ಈ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಮೂಲೋದ್ದೇಶಗಳಲ್ಲೊಂದು. ಆದರೆ ಈ ಯೋಜನೆಯಡಿ, ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದಕ್ಕಾಗಿ ಪ್ರತ್ಯೇಕ ಹಣಕಾಸು ವ್ಯವಸ್ಥೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ರಾಜೀವ್ ಆವಾಸ್ ಯೋಜನೆ (RAY) ಕೊಳಗೇರಿ ಮುಕ್ತ ರಾಜ್ಯದ ಉದ್ದೇಶ ಹೊಂದಿದೆ. ಈ ಯೋಜನೆಯು ಸದ್ಯ ಇರುವ ಕೊಳಗೇರಿಗಳನ್ನು ಮುಖ್ಯವಾಹಿನಿಯೊಂದಿಗೆ ಸೇರಿಸುವ ಜೊತೆ ಜೊತೆಗೇ ಕೊಳಗೇರಿಗಳ ಸೃಷ್ಟಿಯ ಕಾರಣವಾಗುವ ಸೂಕ್ಷ್ಮ ವಿಷಯಗಳನ್ನೂ ಅಭ್ಯಸಿಸುತ್ತದೆ. ಸ್ಥಳೀಯ ಸಂಸ್ಥೆಗಳ ಆಯವ್ಯಯದ ಮಿತಿಯಲ್ಲಿಯೇ ನಗರದ ಬಡಜನರಿಗೆ ಮೂಲಸೌಕರ್ಯ ಒದಗಿಸುವತ್ತ ಈ ಯೋಜನೆ ಗಮನಹರಿಸುತ್ತದೆ.

ಈ ಯೋಜನೆಯೂ ಸಹಾ ನಗರದ ಬಡಜನರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದನ್ನೇ ತನ್ನ ಮೂಲೋದ್ದೇಶಗಳಲ್ಲೊಂದು ಎಂದು ಹೇಳಿದರೂ, ಈ ಉದ್ದೇಶದ ಈಡೇರಿಕೆಗೆ ಯಾವುದೇ ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಇಲ್ಲವೆಂಬ ಸತ್ಯವನ್ನು ಇದು ಮರೆಮಾಚುತ್ತದೆ.

ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆಯು (IHSDP) ಇರುವ ಮನೆಗಳನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಹೊಸ ಮನೆಗಳ ನಿರ್ಮಾಣದ ಮೂಲಕ ನಗರದ ಬಡಜನರಿಗೆ ಆಶ್ರಯ ಕಲ್ಪಿಸುವ ಮೂಲೋದ್ದೇಶ ಹೊಂದಿದೆ. ಜೊತೆಗೆ ಸಾರ್ವಜನಿಕ ಶೌಚಾಲಯಗಳ ನಿರ್ಮಣ, ನೀರು ಸರಬರಾಜು, ಪ್ರವಾಹ ಒಳಚರಂಡಿಗಳ ನಿರ್ಮಾಣ, ಸಾರ್ವಜನಿಕ ಸ್ನಾನಗೃಹಗಳ ನಿರ್ಮಾಣ, ಬೀದಿ ದೀಪ, ರಸ್ತೆಗಳ ಅಗಲೀಕರಣ ಇವೆಲ್ಲವೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಈ ಯೋಜನೆಯ ಹಣಕಾಸು ವ್ಯವಸ್ಥೆಯನ್ನು ವಿಸ್ತ್ರತವಾಗಿ ವಿವರಿಸಲಾಗಿದೆ.

ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿಯು (2008) ನಗರದ ಬಡವರು ಮತ್ತು ಮಹಿಳೆಯರನ್ನು ಕೇಂದ್ರವನ್ನಾಗಿಟ್ಟುಕೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ನಗರ-ಭಾರತವನ್ನು ಸಾರ್ವತ್ರಿಕ ನೈರ್ಮಲ್ಯ ವ್ಯವಸ್ಥೆಯುಳ್ಳ, ಸಮುದಾಯಚಾಲಿತ, ಆರೋಗ್ಯವಂತ, ವಾಸಯೋಗ್ಯ ನಗರ ಮತ್ತು ಪಟ್ಟಣಗಳಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ. ಭಾರತದ ಎಲ್ಲ ನಗರಗಳೂ ಸಂಪೂರ್ಣ ಶೌಚ ವ್ಯವಸ್ಥೆಯುಳ್ಳ ಆರೋಗ್ಯಕರ, ವಾಸಯೋಗ್ಯ ನಗರಗಳಾಗಿಸಿ, ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರ ಒದಗಿಸುವ ಗುರಿ ಹೊಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸಿ ಅವರ ನಡವಳಿಕೆಯಲ್ಲಿ ಧನಾತ್ಮಕ ಪರಿವರ್ತನೆ ತರುವುದು, ತನ್ಮೂಲಕ ನಗರ ನೈರ್ಮಲ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸಮಗ್ರ ಶೌಚ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯ ಮೂಲಕ ಬಯಲು ಶೌಚಾಲಯ ಮುಕ್ತ ನಗರಗಳ ಗುರಿಯನ್ನು ಸಾಕಾರಗೊಳಿಸುವುದೇ ಆಗಿದೆ. ಇದರ ಪ್ರಕಾರ ಪ್ರತಿ ರಾಜ್ಯ ತನ್ನದೇ ‘ರಾಜ್ಯ ನಿರ್ಮಲೀಕರಣ’ ಮತ್ತು ‘ನಗರ ನಿರ್ಮಲೀಕರಣ’ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ.

ನಗರದ ಬಡಜನರ ಮುಖ್ಯ ಸಮಸ್ಯೆ ಭೂ ಗೇಣಿಯ ಪರಿಣಾಮವಾಗಿ ವಸತಿಗೆ ಸಂಬಂಧಿಸಿದಂತೆ ಅವರು ಎದುರಿಸುವ ಅನಿಶ್ಚಿತತೆ ಮತ್ತು ಅಸುರಕ್ಷಿತತೆ, ಒಕ್ಕಲೆಬ್ಬಿಸುವ ನಿರಂತರ ಭಯದೊಂದಿಗೇ ಬದುಕುವ ಅವರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆಯಂತ ಮೂಲಭೂತ ಸೌಕರ್ಯಗಳು ಲಭ್ಯವಿರುವುದಿಲ್ಲ. ಇಂತಹ ಕೊಳಗೇರಿಗಳಲ್ಲಿ ನೀರು ಸಂಗ್ರಹಿಸುವ ಮತ್ತು ನೈರ್ಮಲ್ಯ ಕಾಪಾಡುವ ಹೆಚ್ಚಿನ ಹೊಣೆಯು ಮಹಿಳೆಯರ ಮೇಲೆಯೇ ಇರುತ್ತದೆ.

ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿಯು ಈ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತದೆಯಾದರೂ, ಈ ಸಂಬಂಧ ಇರುವ ಅನೇಕ ಇಲಾಖೆಗಳ ನಡುವೆ ಹೇಗೆ ಸಮನ್ವಯ ಸಾಧಿಸಬೇಕೆನ್ನುವ ಬಗ್ಗೆ ಮತ್ತು ಇದರಿಂದ ಬಾಧಿಸಲ್ಪಡುವ ವಿವಿಧ ಜನರ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆ ಏನನ್ನೂ ಹೇಳುವುದಿಲ್ಲ.

ರಾಷ್ಟ್ರೀಯ ನಗರವಾಸಿ ಮತ್ತು ವಸತಿ ಯೋಜನೆಯು (2007) ಸಮಾಜದ ಎಲ್ಲ ವರ್ಗದವರಿಗೂ ಭೂಮಿಯ ಸಮಾನ ಹಂಚಿಕೆ, ಮತ್ತು ಕೈಗೆಟುಕುವ ದರದಲ್ಲಿ ವಸತಿ ಲಭ್ಯತೆಯನ್ನು ಕಲ್ಪಿಸುವ ಗುರಿ ಹೊಂದಿದೆ. ವಸತಿ ಯೋಜನೆ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಎಲ್ಲ ಹಂತಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಗೊಳಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಯೋಜಿಸಿದೆ.

ಈ ಯೋಜನೆಯು ವೃತ್ತಿನಿರತ ಮಹಿಳೆಯರ, ಒಂಟಿ ಮಹಿಳೆಯರ, ಮಹಿಳಾ ಒಡೆತನದ ಕುಟುಂಬಗಳ ಮಹಿಳೆಯರ, ವಿಶೇಷ ಅಗತ್ಯಗಳನ್ನು ಗುರುತಿಸುವುದರೊಂದಿಗೆ ನೀರು ಮತ್ತು ಶೌಚ ವ್ಯವಸ್ಥೆಯನ್ನೊಳಗೊಂಡಂತೆ ಮೂಲಸೌಕರ್ಯದ ಕೊರತೆಯಿಂದ ಬಾಧಿಸಲ್ಪಟ್ಟ ಮಹಿಳೆಯರ ಅಗತ್ಯಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತದೆ. ಇದೊಂದು ಯೋಜನೆಯು ಮಾತ್ರ ತನ್ನ ಮಾರ್ಗಸೂಚಿಯಲ್ಲಿ ಮಹಿಳೆಯರನ್ನು ಒಳಗೊಳ್ಳಲು ಪ್ರಯತ್ನಿಸಿದೆ.

ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯವು ಕೇಂದ್ರ ಸರ್ಕಾರದ ಅನುದಾನಿತ ‘ಕಡಿಮೆ ವೆಚ್ಚದ ಸಮಗ್ರ ಶೌಚ ವ್ಯವಸ್ಥೆ ಯೋಜನೆ (ICS) ಯೋಜನೆಯನ್ನು (ನಗರಗಳಿಗಾಗಿ) ನಿರ್ವಹಿಸುತ್ತದೆ.

ಸದ್ಯ ಇರುವ ಒಣ ಪಾಯಖಾನೆಗಳನ್ನು ನೀರು-ಸಹಿತ ಪಾಯಖಾನೆಯುಕ್ತ ಶೌಚ ವ್ಯವಸ್ಥೆಯಾಗಿ JOSEFAL (water seal toilets with super structures) ಪಾಯಖಾನೆ ಹೊಂದಿಲ್ಲದ ಆರ್ಥಿಕವಾಗಿ ಹಿಂದುಳಿದ (EWS) ವರ್ಗಕ್ಕೆ ಸೇರಿದ ಕುಟುಂಬದ ಮನೆಗಳಲ್ಲಿ ಹೊಸ ಪಾಯಖಾನೆಗಳ ನಿರ್ಮಾಣ ಈ ಯೋಜನೆಯ ಮುಖ್ಯ ಉದ್ದೇಶಗಳು, ಇವು ನಗರಗಳ ಒಟ್ಟಾರೆ ನೈರ್ಮಲ್ಯವನ್ನು ಹೆಚ್ಚಿಸುತ್ತವೆ.

ಅದಕ್ಕಿಂತ ಮುಖ್ಯವಾಗಿ ಇದು ಅಮಾನವೀಯವಾದ ಮಲಹೊರುವ ಪದ್ಧತಿಯನ್ನು ನಿರ್ಮೂಲನೆಗೊಳಿಸುವಲ್ಲಿ ಸಹಾಯಕವಾಗಿದೆ. ILCSನ ಮೌಲ್ಯಮಾಪನ ವರದಿಯ (ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ, 2007) ಪ್ರಕಾರ ಈ ಯೋಜನೆಯ ಅತಿ ಮುಖ್ಯ ಪರಿಣಾಮವೆಂದರೆ, ಹೀಗೆ ಶೌಚಾಲಯ ಹೊಂದಿರುವ ಮನೆಗಳ ಒಡೆಯರ ಸಾಮಾಜಿಕ ವರ್ಚಸ್ಸು ಹೆಚ್ಚಾಗಿರುವುದು.

ಇಷ್ಟೆಲ್ಲಾ ಯೋಜನೆಗಳಲ್ಲಿ ನಿರ್ಮಲೀಕರಣದ ವಿಷಯ ಪ್ರಸ್ತಾಪವಾಗಿದ್ದರೂ, ನಗರ ನಿರ್ಮಲೀಕರಣಕ್ಕಾಗಿ ಈ ಯೋಜನೆಗಳಲ್ಲಿ ಲಭ್ಯವಿರುವ ಹಣದ ಮೊತ್ತವನ್ನು ಕಂಡುಹಿಡಿಯುವುದು ಕಷ್ಟಸಾಧ್ಯ. ILCS ಯೋಜನೆ ಒಂದರಲ್ಲಿ ಮಾತ್ರವೇ ಇದಕ್ಕಾಗಿ ಮೀಸಲಿಟ್ಟ ಮೊತ್ತವು ತಿಳಿಯುತ್ತದೆ.

ಪಟ್ಟಿ 1ರಲ್ಲಿ HUPA ಆಯವ್ಯಯದಲ್ಲಿ ILCS ಯೋಜನೆಗಾಗಿ ಮೀಸಲಿಟ್ಟ ಹಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿರುವುದನ್ನು ಕಾಣಬಹುದು. 2011ರ ಮನೆ ಗಣತಿಯ ಪ್ರಕಾರ ಇನ್ನೂ 7.94 ಲಕ್ಷ ಪಾಯಖಾನೆಗಳನ್ನು ಜನರು ಕೈಯಿಂದ ಸ್ವಚ್ಛಗೊಳಿಸುತ್ತಾರೆ. ಇದು ಮಲಹೊರುವ ಅಮಾನವೀಯ ಪದ್ಧತಿ ನಮ್ಮ ದೇಶದಲ್ಲಿ ಜೀವಂತವಿರುವುದಕ್ಕೆ ಸಾಕ್ಷಿ.

‘ಕಡಿಮೆ ವೆಚ್ಚದ ಸಮಗ್ರ ಶೌಚವ್ಯವಸ್ಥೆ ಯೋಜನೆ’ (ILCS) ಯೋಜನೆಯೊಂದನ್ನು ಹೊರತುಪಡಿಸಿ ಮತ್ಯಾವುದೇ ಯೋಜನೆಯೂ ನೇರವಾಗಿ ನೀರು ಸರಬರಾಜು ಮತ್ತು ನಿರ್ಮಲೀಕರಣವನ್ನು ಪ್ರಸ್ತಾಪಿಸುವುದಿಲ್ಲ. ನೀರು ಸರಬರಾಜು ಮತ್ತು ನಿರ್ಮಲೀಕರಣವು ವಸತಿ ಯೋಜನೆಗಳ ಭಾಗವಾಗಿ ಇಲ್ಲವೇ ಉದ್ಯೋಗ ಸೃಷ್ಟಿಯ ಭಾಗವಾಗಿ ಪ್ರಸ್ತಾಪಿಸಲ್ಪಡುತ್ತವೆಯೇ ಹೊರತು, ಇದೇ ಒಂದು ಪ್ರಮುಖ ಮತ್ತು ಪ್ರತ್ಯೇಕ ಸಮಸ್ಯೆಯಾಗಿ ಪರಿಗಣಿಸಲ್ಪಟ್ಟಿಲ್ಲ. ನಗರದ ಬಡಜನರ ಅದರಲ್ಲೂ ಕೊಳಗೇರಿ ನಿವಾಸಿಗಳ ನೀರು ಮತ್ತು ಶೌಚ ವ್ಯವಸ್ಥೆಯ ಅವಶ್ಯಕತೆಗಳ ಕಡೆಗೆ ಯೋಜನೆ ರೂಪಿಸುವವರ ನಿರ್ಲಕ್ಷ್ಯವನ್ನೇ ತೋರುತ್ತದೆ.

ನಗರದ ಬಡತನ ಮತ್ತು ನಿರ್ಮಲೀಕರಣ: ನಗರೀಕರಣ

ನಗರದಲ್ಲಿನ ಬಡತನ ಢಾಳಾಗಿ ಕಾಣುವುದು ನಗರದ ಕೊಳಗೇರಿಗಳಲ್ಲಿ, ನಗರದ ಕೊಳಗೇರಿಗಳ ಕೆಲವು ಮುಖ್ಯ ಸೂಚ್ಯಾಂಕಗಳನ್ನು ಪಟ್ಟಿ-2ರಲ್ಲಿ ತೋರಿಸಲಾಗಿದೆ. ಒಟ್ಟಾರೆ ಕೊಳಗೇರಿಗಳ ಪೈಕಿ 42% ಗುರುತಿಸದಿರುವ ಕೊಳಗೇರಿಗಳು ಮತ್ತು ಅವುಗಳಲ್ಲಿ 45% ಕೊಳಗೇರಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ನಿರ್ಮಲೀಕರಣ ಎನ್ನುವುದು ಕೇವಲ ಶೌಚಾಲಯಗಳ ನಿರ್ಮಾಣಕ್ಕೆ ಸೀಮಿತವಾದದ್ದಲ್ಲ. ಬದಲಿಗೆ ಬದುಕುವುದಕ್ಕೆ ಸ್ವಚ್ಛವಾದ ವಾತಾವರಣ ಕಲ್ಪಿಸುವುದೂ ಅದರ ಭಾಗವೇ ಆಗಿದೆ.

ಹಾಗಾಗಿ ಕಸದ ವಿಲೇವಾರಿಯನ್ನೂ ಇಲ್ಲಿ ನಿರ್ಮಲೀಕರಣದ ಭಾಗವಾಗಿ ಪರಿಗಣಿಸಿದರೆ, ಕೇವಲ 38% ಗುರುತಿಸದಿರುವ ಕೊಳಗೇರಿಗಳಲ್ಲಿ ಮಾತ್ರವೇ ಕಸ ವಿಲೇವಾರಿಯ ವ್ಯವಸ್ಥೆ ಇದೆ.

ನಗರಾಡಳಿತ, ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ ಹೇಗೆ ನಗರದ ನಿರ್ಮಲೀಕರಣದ ಸಮಸ್ಯೆಯನ್ನು ಬಗೆಹರಿಸಬಹುದೆಂಬುದಕ್ಕೆ ತಮಿಳುನಾಡಿನ ತಿರುಚನಾಪಲ್ಲಿ ಒಂದು ಉದಾಹರಣೆ. ನಗರದ ಕೊಳಗೇರಿ ನಿವಾಸಿಗಳಿಗಾಗಿ ಸಮುದಾಯ ನಿರ್ವಹಣೆಯ ಶೌಚಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲಾಯಿತು. (Water Aid India, 2008) ಮುಖ್ಯವಾಗಿ ಇದು ಸಾಧ್ಯವಾದದ್ದು ತೆರೆದ ಮನಸ್ಸಿನ ನಗರಾಡಳಿತ, ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದ್ದರಿಂದ, ಕೊಳಗೇರಿಗಳಲ್ಲಿ ಆರೋಗ್ಯವನ್ನು ಮತ್ತು ನೈರ್ಮಲ್ಯವನ್ನು ಸಾಧಿಸಲು ದೊಡ್ಡ ಮೊತ್ತದ ಹಣ ಬೇಕಿಲ್ಲ.

ಬದಲಿಗೆ ಬೇಕಿರುವುದು ಕೊಳಗೇರಿ ಜನರ ಕಷ್ಟಗಳಿಗೆ ಕಿವಿಗೊಡುವ ತೆರೆದ ಮನಸ್ಸಿನ ನಗರಾಡಳಿತ, ಸಹಾಯಕ ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು, ಸಮುದಾಯಗಳು ಶೌಚಾಲಯಗಳನ್ನು ತಾವೇ ನಿರ್ವಹಿಸುತ್ತಿದ್ದರಿಂದ ಇದು ಮಹಿಳಾ ಸಬಲೀಕರಣಕ್ಕೂ ದಾರಿ ಮಾಡಿಕೊಟ್ಟಿತಲ್ಲದೇ ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ಧಿಯ ಮೇಲೂ ಸಾಕಷ್ಟು ಸಕಾರಾತ್ಮಕ ಪರಿಣಾಮವನ್ನೇ ಬೀರಿತು.

ಇದಕ್ಕೆ ತದ್ವಿರುದ್ದವಾಗಿ ‘ಜಾಗೋರಿ, ಮತ್ತು ಅಂತಾರಾಷ್ಟ್ರೀಯ ನಗರಗಳಲ್ಲಿ ಮಹಿಳೆಯರು’ ನಡೆಸಿದ ಅಂತರಾಷ್ಟ್ರೀಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ” ಏಷ್ಯಾದ ನಗರಗಳಲ್ಲಿ ಮಹಿಳೆಯ ಹಕ್ಕುಗಳು ಹಾಗೂ ನೀರು ಮತ್ತು ಶೌಚವ್ಯವಸ್ಥೆಯ ಲಭ್ಯತೆ (2009- 2011) ವರದಿಯ ಪ್ರಕಾರ ದೆಹಲಿಯ ಸರ್ಕಾರ ಜೆಜೆ ಕಾಲೋನಿಯ ಪ್ರತಿಯೊಬ್ಬರ ಮೇಲೆ ನೀರಿಗಾಗಿ ಖರ್ಚು ಮಾಡುವ ಮೊತ್ತ ಕೇವಲ ರೂ.30/- ($0.66) ಮತ್ತು ನಿರ್ಮಲೀಕರಣಕ್ಕಾಗಿ ವ್ಯಯಿಸುವುದು ರೂ.60/- (Sl.78) ಮಾತ್ರ (2011- 12) .

ದೆಹಲಿಯಲ್ಲಿ ನೀರು ಮತ್ತು ನಿರ್ಮಲೀಕರಣವನ್ನು ವಿವಿಧ ಸಂಸ್ಥೆಗಳು ನಿರ್ವಹಿಸುತ್ತಿದ್ದುದರಿಂದ ಯಾವುದೇ ಸಂಸ್ಥೆಯೂ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರಲಿಲ್ಲ. ಜೊತೆಗೆ ಇದು ನೀರು ಮತ್ತು ನಿರ್ಮಲೀಕರಣದ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.

ಈ ಎರಡು ಉದಾಹರಣೆಗಳು ದೇಶದಾದ್ಯಂತ ಹೇಗೆ ನೀರು ಮತ್ತು ನಿರ್ಮಲೀಕರಣದ ವ್ಯವಸ್ಥೆ ಭಿನ್ನವಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ ಹೇಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಒಟ್ಟಾರೆಯಾಗಿ ‘ಒಂದೇ ಮಂತ್ರ’ ಎಲ್ಲ ಕಡೆಗೂ ಹೊಂದುವುದಿಲ್ಲ ಎಂಬುದನ್ನು ಅರಿಯುವುದು ಬಹು ಮುಖ್ಯ

ಭಾರತದ ಅಭಿವೃದ್ಧಿಯ ಗಾದೆ ಆಸಕ್ತಿದಾಯಕವಾಗಿದ್ದರೂ, ನಿರ್ಮಲೀಕರಣದ ಅಂಕಿ ಅಂಶಗಳನ್ನು ಗಮನಿಸಿದಾಗ ಹೇಳಿಕೊಳ್ಳುವುದಕ್ಕೆ ಅಲ್ಲಿ ಹೆಚ್ಚೇನೂ ಇಲ್ಲ. ಒಂದೇ ಸಮನೆ ಹೆಚ್ಚುತ್ತಿರುವ ಕೊಳಗೇರಿಯ ಜನಸಂಖ್ಯೆಯ ಜೊತೆಗೆ ನೀರು ಮತ್ತು ಶೌಚ ವ್ಯವಸ್ಥೆಗಳಂತ ಮೂಲಭೂತ ಸೌಕರ್ಯಗಳ ಮೇಲೆ ಒತ್ತಡ ತೀವ್ರವಾಗುತ್ತಲೇ ಇದೆ. ಶೌಚಾಲಯಗಳ ನಿರ್ಮಾಣ ಸಮಗ್ರ ನಿರ್ಮಲೀಕರಣ ವ್ಯವಸ್ಥೆಯ ಒಂದು ಭಾಗ ಮಾತ್ರ.

ಒಳಚರಂಡಿ ವ್ಯವಸ್ಥೆ, ನೀರಿನ ಪುನರ್‌ಬಳಕೆ, ಘನತ್ಯಾಜ್ಯ ನಿರ್ವಹಣೆ ಇವೆಲ್ಲವನ್ನೂ ಜೊತೆಗೆ ನಿರ್ವಹಿಸುವುದು ಅತ್ಯವಶ್ಯಕ ಮತ್ತು ಇದರಲ್ಲಿ ನಗರಾಡಳಿತ ಮುಖ್ಯ ಪಾತ್ರ ವಹಿಸಬೇಕಿದೆ.

ಕೊಳಗೇರಿಗಳಲ್ಲಿ ಸುರಕ್ಷಿತ ಮತ್ತು ಸಮರ್ಥ ನೈರ್ಮಲ್ಯವನ್ನು ಸಾಧಿಸುವುದು ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ, ಆರೋಗ್ಯ ಸುಧಾರಿಸುವಲ್ಲಿ ಹಾಗೂ ಅವರ ಖಾಸಗಿತನ ಮತ್ತು ಆತ್ಮಗೌರವವನ್ನು ಕಾಪಾಡುವಲ್ಲಿ ಬಹಳ ಸಹಾಯಕವಾಗಿದೆ. ಆದರೆ ನಗರ ನಿರ್ಮಲೀಕರಣದ ಬಹಳಷ್ಟು ಯೋಜನೆ ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣುವುದೇ ಇಲ್ಲ. ಮಲಹೊರುವ ಪದ್ದತಿ ಇನ್ನೂ ಚಾಲ್ತಿಯಲ್ಲಿದೆ ಎನ್ನುವ ಅಂಶವೇ, ಒಣ ಪಾಯಖಾನೆಗಳ ಬಳಕೆಯನ್ನು ನಿಲ್ಲಿಸುವ ಹಾಗೂ ನೀರು-ಸಹಿತ ಪಾಯಖಾನೆಯುಕ್ತ ಶೌಚವ್ಯವಸ್ಥೆಯನ್ನು ಬಳಕೆಗೆ ತರುವ ಕೆಲಸ ಪರಿಣಾಮಕಾರಿಯಾಗಿ ಆಗಿಲ್ಲ ಎಂಬುದನ್ನು ತೋರಿಸುತ್ತದೆ.

“ಶೌಚಾಲಯದ ಹಕ್ಕು” ಕುರಿತಾಗಿ ಇನ್ನು ಸಮರ್ಥವಾದ ಮತ್ತು ತೀವ್ರವಾದ ಪ್ರಚಾರಾಂದೋಲನವನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಬೇಕಾದ ಅಗತ್ಯವಿದೆ. ಇದು ಪ್ರಮುಖವಾಗಿ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವತ್ತ ಗಮನ ಕೇಂದ್ರೀಕರಿಸಬೇಕಿದೆ. ಜನಜಾಗೃತಿ ಮೂಡಿಸುವ ಮೂಲಕ ಸುರಕ್ಷಿತ ಶೌಚವ್ಯವಸ್ಥೆಯ ಬಳಕೆಯನ್ನು ಉತ್ತೇಜಿಸುವುದರ ಜೊತೆಗೆ ಶೌಚವ್ಯವಸ್ಥೆಯಲ್ಲಿ ಹೊಸ ಮತ್ತು ಅವಿಷ್ಕಾರಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸಬೇಕಿದೆ.

ಕೊಳಗೇರಿ ನಿವಾಸಿಗಳ ಭೂಮಿಯ ಹಕ್ಕು, ಜೀವನೋಪಾಯದ ಅವಕಾಶಗಳು, ಶಿಕ್ಷಣ ಮತ್ತು ಆರೋಗ್ಯದಂತ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದು ಸಹ ನಗರದ ಕೊಳಗೇರಿಗಳ ನಿರ್ಮಲೀಕರಣದ ಯೋಜನೆಗಳ ಯಶಸ್ಸಿಗೆ ಸಹಕಾರಿಯಾಗಿದೆ (ಪಾಂಡ ಮತ್ತು ಅಗರ್‌ವಾಲ್‌, 2013), ಸಾಕಷ್ಟು ಹಣಕಾಸಿನ ನೆರವು ಮತ್ತು ಸಶಕ್ತ ಅನುಷ್ಠಾನದ ಹೊರತು ನಗರ ನಿರ್ಮಲೀಕರಣದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಪರಿಣಾಮಕಾರಿಯಾಗಲಾರವು.

ಸರ್ಕಾರ ಮತ್ತು ನಗರಾಡಳಿತಗಳ ಪ್ರಬಲ ರಾಜಕೀಯ ಇಚ್ಛಾಶಕ್ತಿಯು ನಗರ ನಿರ್ಮಲೀಕರಣದ ವಿಚಾರದಲ್ಲಿ ಸಾಕಷ್ಟು ಬದಲಾವಣೆ ತರಬಲ್ಲವು. “ಸ್ಮಾರ್ಟ್ ಸಿಟಿ” ಎಂಬುದು ಹೊಸಮಂತ್ರವಾಗಿರುವ ಈ ದಿನಗಳಲ್ಲಿ ಪ್ರಸಕ್ತ ಕೇಂದ್ರ ಸರ್ಕಾರವು ನೈರ್ಮಲ್ಯವನ್ನು ಕೇಂದ್ರವಾಗಿಸಿಕೊಂಡು ‘ಸ್ವಚ್ಛಭಾರತ ಅಭಿಯಾನ’ವನ್ನು ರೂಪಿಸಿರುವುದು ಸ್ವಾಗತಾರ್ಹ. ಎಂದಿಗೆ ಶೌಚವ್ಯವಸ್ಥೆ ಎಂಬುದು ಒಂದು ಕೊಳಕು ಪದ ಎಂಬುದು ಕರಗಿ ಅದು ನಮ್ಮ ಆದ್ಯತೆಯ ಕ್ಷೇತ್ರವಾಗುತ್ತೆಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....