Kannada essays

ನಗರಗಳಲ್ಲಿ ಮಾಲಿನ್ಯತೆ 2023 | Urban Pollution: Battling Contamination in Cities

ನಗರಗಳಲ್ಲಿ ಮಾಲಿನ್ಯತೆ

‘ನನಗೆ ಅಭಿವೃದ್ಧಿ ಹೊಂದದ ದೇಶದಲ್ಲಿ ಶುದ್ಧ ನೀರು ಕುಡಿಯಲಾಗುವುದಿಲ್ಲ. ಹಾಗೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಉಸಿರಾಡಲು ಆಗುವುದಿಲ್ಲ” ಎಂಬ ಪರಿಸರವಾದಿಯೊಬ್ಬರ ಈ ಸಾಲುಗಳು ಇಡೀ ವಿಶ್ವವನ್ನೇ ಅಣಕಿಸುವಂತಿವೆ, ಕೇವಲ ಅಭಿವೃದ್ಧಿ ಎಂಬ ನಾಗಾಲೋಟದಲ್ಲಿರುವ ಪ್ರಪಂಚ ತಾನಿರುವ ಭೂಮಿಯನ್ನೇ ಮರೆತಿದೆ. ನಮ್ಮ ವಾತಾವರಣಕ್ಕೆ ಯಾವುದೇ ಘನ, ದ್ರವ ಮತ್ತು ಅನಿಲಗಳು ಪರಿಚಯವಾಗುತ್ತಿದ್ದಂತೆ ಮಾಲಿನ್ಯ ಪ್ರಾರಂಭವಾಗುತ್ತದೆ. ಸುಮಾರು 2030ರ ವೇಳೆಗೆ ಭಾರತದ ಅರ್ಧದಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತದೆ ಎಂದು ಊಹಿಸಲಾಗಿದೆ. ಈ ವೇಗದಲ್ಲಿ ನಗರೀಕರಣ ಆಗುತ್ತಿರುವುದು ಹಲವಾರು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ.

ಮುಖ್ಯವಾಗಿ ಕುಡಿಯುವ ನೀರು ಸರಬರಾಜು, ತ್ಯಾಜ್ಯ ವಿಲೇವಾರಿ, ನಗರ ಪಟ್ಟಣಗಳಿಂದ ಸೃಷ್ಟಿಯಾಗುವ ತ್ಯಾಜ್ಯ, ಬಯಲು ಪ್ರದೇಶದ ಕೊರತೆ, ವಾಯು ಹಾಗೂ ಜಲ ಮಾಲಿನ್ಯ, ಸಾರ್ವಜನಿಕ ಸಾರಿಗೆ ಹೀಗೆ ಹತ್ತು ಹಲವು ಸಮಸ್ಯೆಗಳು ಈ ಎಲ್ಲಾ ಸಮಸ್ಯೆಗಳ ಮೂಲವೆಂದರೆ ಪೂರ್ವ ಯೋಜಿತವಲ್ಲದ ನಗರಗಳ ಬೆಳವಣಿಗೆ, ಭೂಮಿ, ನೀರು ಮುಂತಾದ ಸಂಪನ್ಮೂಲಗಳ ಅತಿಯಾದ ಬಳಕೆಯಾಗಿದೆ. ಯಾವ ಸಮಸ್ಯೆ ಹಾಗೂ ಸವಾಲುಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂಬುದಕ್ಕೆ ಹಲವು ಬಾರಿ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಗರ ಯೋಜನೆ ನಿರೂಪಕರು ಆಡಳಿತಗಾರರು ಈ ಸಮಸ್ಯೆಗಳ ಬಗ್ಗೆ ನಿಗಾವಹಿಸುವಂತೆ ಬಹಳ ಗಂಭೀರವಾಗಿರುವ ನಗರಗಳ ಪರಿಸರ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಪ್ರಮುಖ ಕಾರಣಗಳು : ನಗರಗಳಲ್ಲಿ ಮಾಲಿನ್ಯತೆ

1. ಪೂರ್ವ ಯೋಜಿತವಲ್ಲದ ನಗರ ವಿನ್ಯಾಸ

ಯಾವುದೇ ಒಂದು ನಗರವನ್ನು ನಿರ್ಮಿಸುವಾಗ, ಒಳಚರಂಡಿ ವ್ಯವಸ್ಥೆ, ರಸ್ತೆಗಳ ನಿರ್ಮಾಣ, ಉದ್ಯಾನವನಗಳು, ಮಾರುಕಟ್ಟೆ ಪ್ರದೇಶ, ಸಾರ್ವಜನಿಕ ಪ್ರದೇಶಗಳು ಇತ್ಯಾದಿಗಳು ಇಂತಿಷ್ಟೇ ಬರ್ಣ, ಇದೇ ಜಾಗದಲ್ಲಿರಬೇಕು ಎಂಬ ನೀತಿ ನಿಯಮಗಳನ್ನು ರೂಪಿಸಿಕೊಂಡು ನಗರ ಸ್ಥಳೀಯ ಸಂಸ್ಥೆಗಳು ಯೋಜನೆಗಳನ್ನು ರೂಪಿಸಬೇಕು. ಅಲ್ಲದೆ ಬಡಾವಣೆ ನಿರ್ಮಾಣ, ಅಪಾರ್ಟ್‌ ಮೆಂಟ್‌ಗಳನ್ನು ನಿರ್ಮಿಸುವಾಗ ಕೂಡ ಇವುಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಖಾತ್ರಿ ಪಡಿಸಿಕೊಂಡು ಅನುಮತಿ ನೀಡಬೇಕಾಗುತ್ತದೆ. ಆದರೆ ಈ ನೀತಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಅನುಮತಿಯಿತ್ತಾಗ ನಗರಗಳು ಎಗ್ಗಿಲ್ಲದಂತೆ ಬೆಳೆದು ಮಾಲಿನ್ಯದ ಪರ್ವತಗಳಾಗಿ ಮಾರ್ಪಡುತ್ತವೆ.

2. ಹಳ್ಳಿ ಜನರ ನಗರಗಳತ್ತ ವಲಸೆ:

ಒಂದಾನೊಂದು ಕಾಲದಲ್ಲಿ ಭಾರತ ಹಳ್ಳಿ ಸೊಗಡಿನ ದೇಶವಾಗಿತ್ತು. ರೈತರೇ ದೇಶದ ಬೆನ್ನೆಲುಬು ಎಂಬಂತೆ ರೈತ ಹೊಲಗಳಲ್ಲಿ ದುಡಿಯುತ್ತಾ ದೇಶಕ್ಕೆ ಆಹಾರವನ್ನು ಪೂರೈಸುತ್ತಿದ್ದ, ಗುಡಿ ಕೈಗಾರಿಕೆಗಳು ಅಂದರೆ, ಕುಂಬಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ನೂಲುವುದು, ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಇತ್ಯಾದಿಗಳು ಹಳ್ಳಿ ಜನರ ಉದ್ಯೋಗ ಕೇಂದ್ರಗಳಾಗಿದ್ದವು. ಆದರೆ ಕೈಗಾರಿಕರಣ, ಜಾಗತೀಕರಣ, ನಗರೀಕರಣ ಬೆಳೆದು ವಿದೇಶಿ ವಸ್ತುಗಳು ಲಗ್ಗೆಯಿಟ್ಟು, ಸ್ವದೇಶಿ ವಸ್ತುಗಳು ಬೇಡಿಕೆಯಿಲ್ಲದಾಗಿ, ಹಳ್ಳಿ ಜನರ ಬದುಕು ನಲುಗಿ ಹೋಯಿತು, ಗುಡಿ ಕೈಗಾರಿಕೆಗಳು ನಾಶವಾಗಿ ಹಳ್ಳಿ ಜನರು ಉದ್ಯೋಗವಿಲ್ಲದೆ, ನಗರಗಳತ್ತ ಉದ್ಯೋಗ ಅರಸುತ್ತಾ ವಲಸೆ ಬರಲಾರಂಭಿಸಿದರು. ಆಗ ನಗರಗಳು ಜನನಿಬಿಡ ಪ್ರದೇಶಗಳಾಗಿ ಮಾರ್ಪಡುತ್ತಾ ಮಾಲಿನ್ಯತೆಯನ್ನು ತುಂಬಿಕೊಂಡವು.

3. ಘನತ್ಯಾಜ್ಯ ನಿರ್ವಹಣೆ

ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ತ್ಯಾಜ್ಯ ಉತ್ಪಾದನೆಯು ಅಧಿಕವಾಯಿತು. ಪ್ರತಿಯೊಬ್ಬ ವ್ಯಕ್ತಿ ಅಂದಾಜು 500 ಗ್ರಾಂ ತ್ಯಾಜ್ಯವನ್ನು ಪ್ರತಿದಿನ ಉತ್ಪಾದಿಸುತ್ತಾನೆ. ಇತ್ತೀಚಿನ ಯುವ ಜನರ ಫ್ಯಾಷನ್‌ನಿಂದ ಇನ್ನೆಂಟ್ ಆಹಾರ ಪದ್ಧತಿಯು ಬೆಳವಣಿಗೆಯಾಗಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದಂತೆ ಸಾಗಿದೆ. ಕುಡಿಯುವ ನೀರಿನ ಬಾಟಲ್‌ಗಳು, ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅಲ್ಲದೆ ಮನೆಯಿಂದ ಪ್ರತಿದಿನ ಉತ್ಪತಿಯಾಗುವ ತ್ಯಾಜ್ಯ, ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ, ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ನಿರ್ವಹಿಸುವುದೇ ಇಂದಿನ ನಗರಗಳ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಗರಗಳಲ್ಲಿ ಮಾಲಿನ್ಯತೆ

4. ಹೆಚ್ಚಿದ ವಾಹನ ದಟ್ಟಣೆ

ಇತ್ತೀಚಿನ ದಿನಗಳಲ್ಲಿ ವಾಹನ ಹೊಂದುವುದು ಫ್ಯಾಷನ್ ಎಂಬುದಾಗಿ ಒಬ್ಬರಿಗೆ ಒಂದು ಕಾರು, ಬೈಕು ರಸ್ತೆಗಿಳಿಯುತ್ತಿವೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವುದಲ್ಲದೆ, ವಾಯು ಮಾಲಿನ್ಯದ ಪ್ರಮಾಣವು ಏರಿಕೆಯಾಗುತ್ತಿದೆ. ಇಂಗಾಲದ ಡೈ ಆಕ್ಸೆಡ್, ಮೊನಾಕ್ಸೆಡ್ ಪ್ರಮಾಣ ಅಧಿಕವಾಗುತ್ತಿದೆ. ಕಾರ್ಖಾನೆಗಳು ಹೊರ ಸೂಸುವ ರಾಸಾಯನಿಕಗಳು, ಧೂಳು ಹೊಗೆ ಇತ್ಯಾದಿಗಳಿಂದ ಜನ ಶ್ವಾಸಕೋಶ ಹಾಗೂ ಇನ್ನಿತರ ಉಸಿರಾಟ ಸಂಬಂಧಿ ಕಾಯಿಲೆಗಳಿಂದ ನರಳುವಂತಾಗಿದೆ.

5. ಒಳ ಚರಂಡಿಯ ವ್ಯವಸ್ಥೆ ಸರಿಯಿಲ್ಲದಿರುವುದು:

ನಗರಗಳಲ್ಲಿ ಮನೆಗಳು ಹೆಚ್ಚಾದಂತೆ ಒಳ ಚರಂಡಿಯ ವ್ಯವಸ್ಥೆ ಸರಿಯಾಗಿ ನಿರ್ವಹಿಸುತ್ತಿಲ್ಲ. ಕಾಲುವೆಗಳು, ಕೆರೆಗಳನ್ನು ಮುಚ್ಚಿ, ಬಡಾವಣೆ, ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ನಗರಗಳೆ ಕೆರೆಯಂತಾಗಿ ಪರಿಣಮಿಸುತ್ತವೆ. ತೆರೆದ ಚರಂಡಿಗಳು, ಮ್ಯಾನ್ ಹೋಲ್ ಗಳಿಂದ ಕೊಳಚೆ ನೀರು ಹೊರ ಬರುತ್ತಿದ್ದರೂ ಯಾರೂ ಗಮನಿಸುವುದಿಲ್ಲ ಇದರಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ನಗರಗಳಲ್ಲಿ ಮಾಲಿನ್ಯತೆ

6. ಸಂಸ್ಕರಣೆಯಿಲ್ಲದ ಕುಡಿಯುವ ನೀರು

ನಗರಗಳಲ್ಲಿ ಕುಡಿಯುವ ನೀರು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ನೀರು ಸಿಗುವುದೇ ದುಸ್ತರವಾಗಿದ್ದು, ಸಿಗುವ ನೀರು ಸಂಸ್ಕರಣೆಯಾಗದೇ ಸಿಗುತಿರುವುದು, ದುಸ್ತರ, ಅಲ್ಲದೇ ಕಾರ್ಖಾನೆಗಳ ತ್ಯಾಜ್ಯ ನೀರು, ಮನೆಗಳ ತ್ಯಾಜ್ಯ ನೀರು, ಆಸ್ಪತ್ರೆಗಳ ತ್ಯಾಜ್ಯ ನೀರು ಸೇರಿ: ರಾಸಾಯನಿಕವಾಗಿ ಪರಿಣಮಿಸಿ ಅವುಗಳನ್ನು ಕೆರೆಗಳಿಗೆ ಬಿಡುತ್ತಿರುವುದರಿಂದ ನೊರೆಯಾಗಿ ಪರಿವರ್ತಿತವಾಗಿರುವ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಬಹುದು. ಇದರಿಂದ ಜನರು ನಾನಾ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ.

7. ಕಟ್ಟಡ ತ್ಯಾಜ್ಯ ನಿರ್ವಹಣೆ

ನಗರಗಳಲ್ಲಿ ಕಟ್ಟಡಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುತಿದ್ದಾರೆ. ಅದರ ಧೂಳು, ಹಳೇ ಕಬ್ಬಿಣ, ಸಿಮೆಂಟ್‌ಗಳಿಂದ ಮಾಲಿನ್ಯ ಹೆಚ್ಚಾಗಿದೆ. ಅಲ್ಲದೆ ಮೆಟ್ರೋ ನಿರ್ಮಾಣ, ರಸ್ತೆ ನಿರ್ಮಾಣ, ಅಪಾರ್ಟ್‌ ಮೆಂಟ್ ನಿರ್ಮಾಣಗಳಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲಸ ಮುಗಿದ ಮೇಲೂ ಅವುಗಳನ್ನು ಅಲ್ಲೇ ಬಿಡುವುದರಿಂದ ಮಳೆ ಬಂದಾಗ ಅದು ಎಲ್ಲೆಂದರಲ್ಲಿ ಹರಿದು ಹೋಗಿ ಚರಂಡಿ ತುಂಬಿಕೊಳ್ಳುವುದು, ರಸ್ತೆ, ತುಂಬಿಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ.

ನಗರಗಳಲ್ಲಿ ಮಾಲಿನ್ಯತೆ

8. ಮರಗಳ ಮಾರಣಹೋಮ

ರಸ್ತೆ ನಿರ್ಮಾಣ, ಮೆಟ್ರೋ ನಿರ್ಮಾಣ, ಅಪಾರ್ಟ್‌ ಮೆಂಟ್‌ಗಳ ನಿರ್ಮಾಣ, ಮನೆಗಳ ನಿರ್ಮಾಣಗಳಿಂದ ಮರಗಳನ್ನು ಕಡಿಯುತ್ತಿದ್ದಾರೆ. ಅಲ್ಲದೆ ಇವುಗಳಿಂದ ಇರುವ ಮರಗಳ ಬೇರು ಭದ್ರವಿಲ್ಲದೆ, ಮಳೆ ಗಾಳಿ ಬಂದಾಗ ಮರಗಳು ಈವಾಗಿದೆ ಬಿದ್ದು ಅಪಘಾತ ಅನಾಹುತ ಸಂಭವಿಸುತ್ತಿದೆ. ಇದರಿಂದ ವಾಯುಮಾಲಿನ ಹೆಚ್ಚುವುದಲ್ಲದೆ, ಹುಡುಕಿದರೂ ನೆರಳು ಸಿಗುವುದಿಲ್ಲ. ನಗರವೆಂದರೆ ಹರೇ ಇಲ್ಲದ ಕಟ್ಟಡಗಳ ಬೀಡಾಗಿಪರಿಣಮಿಸಿದೆ.

9. ನೈರ್ಮಲ್ಯದ ಅರಿವಿಲ್ಲದಿರುವುದು

ಭಾರತ ನಗರ ಪ್ರದೇಶಗಳಲ್ಲಿ ಬಯಲು ಶೌಚಾಲಯ ಬಳಕೆ ವ್ಯಾಪಕವಾಗಿದೆ. ನಗರ ಪ್ರದೇಶದ ಅದೆಷ್ಟೋ ಕುಟುಂಬಗಳು ಶೌಚಾಲಯಗಳನ್ನು ಹೊಂದಿಲ್ಲ. ನಿತ್ಯ ಕರ್ಮಕ್ಕೆ ಬಯಲು ಪ್ರದೇಶವನ್ನೇ ಉಪಯೋಗಿಸುತ್ತಾರೆ ಮತ್ತು ಸಾಮೂಹಿಕ ಶೌಚಾಲಯವನ್ನು ಉಪಯೋಗಿಸುತ್ತಾರೆ. ಅಲ್ಲದೆ ಎಲ್ಲೆಂದರಲ್ಲಿ ಮೂತ್ರ ಮಾಡುವುದು, ಉಗುಳುವುದು, ಆಹಾರ ಪದಾರ್ಥಗಳ ಪಾಲಿ ಮೊಟ್ಟಗಳನ್ನು ಎಸೆಯುವುದು, ಖಾಲಿ ಬಾಟಲಿಗಳನ್ನು ಎಸೆಯುವುದು ಮಾಡುತ್ತಾರೆ. ಇದರಿಂದ ಮಾಲಿನ್ಯ ಹೆಚ್ಚುತ್ತಿದೆ.

10. ಅದಕ್ಷತೆ ಮತ್ತು ಇಚ್ಚಾಶಕ್ತಿಯ ಕೊರತೆ

ಯಾವುದಕ್ಕೂ ನಮಗೆ ಇಚ್ಚಾಶಕ್ತಿ ಬೇಕಾಗುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡದೇ ಇರಲು ನೂರು ಕಾರಣಗಳಿರಬಹುದು. ಆದರೆ ಮಾಲಿನ್ಯವನ್ನು ಕಡಿಮೆ ಮಾಡಲು ಒಂದೇ ಶಕ್ತಿ ಸಾಕು. ಅದು ದಕ್ಷತೆ ಮತ್ತು ಇಚ್ಛಾಶಕ್ತಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕ ನಿಯಮಗಳ ಅನ್ವಯ ನಡೆದುಕೊಂಡರೆ ಸಾಕು, ತಮ್ಮ ಪಾಲಿನ ನೈರ್ಮಲ್ಯವನ್ನ ಕಡಿಮೆ ಮಾಡಲು ಎಲ್ಲರಿಗೂ ಶ್ರಮಿಸಿದರೆ ಅದು ಅಪಾರ ಬೆಳವಣಿಗೆಯಾಗುತ್ತದೆ.

ನಗರ ಮಾಲಿನ್ಯತೆಗೆ ಪರಿಹಾರಗಳು

1. ಯೋಜಿತ ನಗರ ವ್ಯವಸ್ಥೆ ರೂಪಿಸುವುದು. ಒಳ ಚರಂಡಿ, ರಸ್ತೆ, ಉದ್ಯಾನವನ, ಸಾರ್ವಜನಿಕ ಪ್ರದೇಶಗಳಿಗೆ ಸ್ಥಳಗಳನ್ನು ಮೀಸಲಿಡುವುದು, ಅಪಾರ್ಟ್‌ ಮೆಂಟ್, ನಿರ್ಮಾಣಕ್ಕಾಗಿ ಅನುವಂತಿ ನೀಡುವಾಗ ೩೬ ನಿಯಮಗಳಿಗನುಸಾರವಾಗಿ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು.

2 ತ್ಯಾಜ್ಯ ನಿರ್ವಹಣೆಯಲ್ಲಿ ಹಸಿ ತ್ಯಾಜ್ಯ ಓಣ ತ್ಯಾಜ್ಯ ವಿಂಗಡಿಸಿಕೊಡುವಂತೆ ಜನರನ್ನು ಪ್ರೇರೇಪಿಸುವುದು, ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸಲು ತರಬೇತಿ ನೀಡಿ, ಪ್ರೋತ್ಸಾಹಿಸುವುದು, ಮನ‌ ಬಳಕೆ ಮಾಡಬಹುದಾದ ವಸ್ತುಗಳನ್ನು ಉಪಯೋಗಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು.

3. ಮರಗಳನ್ನು ನೆಡುವುದು, ಮನೆಗಳಲ್ಲಿ ಚಿಕ್ಕ ಉದ್ಯಾನವನ ನಿರ್ಮಾಣಕ್ಕೆ ಪ್ರೇರೇಪಿಸಬೇಕು.

4. ನೀರಿನ ಸರಿಯಾದ ಬಳಕೆ ಮಾಡಬೇಕು. ಕಡಿಮೆ ನೀರನ್ನು ಉಪಯೋಗಿಸಬೇಕು. ಕಾರ್ಖಾನೆಗಳ ನೀರನ್ನು ಆಸ್ಪತ್ರೆಗಳನ್ನು ನೀರನ್ನು ಕೆರೆಗೆ ಬಿಡದೆ ಅಲ್ಲೇ ಇಂಗು ಗುಂಡಿಗಳನ್ನು ನಿರ್ಮಿಸಬೇಕು ಮತ್ತು ನೀರನ್ನು ಪುನಃ ಸಂಸ್ಕರಿಸಿ ಉಪಯೋಗಿಸಬೇಕು.

5. ವಾಹನಗಳಿಗೆ ಲೈಸೆನ್ಸ್ ನೀಡುವಾಗ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು. ಜನರು ಹೆಚ್ಚಾಗಿ ಸಾರ್ವಜನಿಕ ವಾಹನಗಳಲ್ಲಿ ಓಡಾಡುವಂತೆ ಪ್ರೇರೇಪಿಸಬೇಕು.

6. ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಾಗಿ ನಿರ್ಮಿಸಿ, ಜನರು ಅವುಗಳನ್ನು ಉಪಯೋಗಿಸಲು ಪ್ರೇರೇಪಿಸಬೇಕು.

7. ಕಟ್ಟಡ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಪುನರ್ ಬಳಕೆ ಮಾಡಬಹುದಾದನ್ನು ಬಳಸಬೇಕು. ಒಳ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು.

8. ಸೋರಿಕೆ ಕಂಡು ಬಂದಲ್ಲಿ ಬೇಗ ಸರಿಪಡಿಸಬೇಕು. ಮ್ಯಾನ್ ಹೋಲ್‌ಗಳನ್ನು ಮುಚ್ಚಬೇಕು.

9. ಮಳೆ ನೀರಿನ ಸಂಗ್ರಹಣೆ ಮಾಡಬೇಕು ಮಳೆ ನೀರು ಸರಿಯಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು. ಕೆರೆಗಳ ಹೂಳೆತ್ತುವ ಕೆರೆಗಳಲ್ಲಿನ ತ್ಯಾಜ್ಯ ತೆಗೆಯುವ ಕೆಲಸವಾಗಬೇಕು.

10. ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಎಲ್ಲೆಂದರಲ್ಲಿ ಎಸೆಯುವ ಉಗುಳುವ, ಪ್ರವೃತ್ತಿಯವರಿಗೆ ದಂಡಗಳನ್ನು ವಿಧಿಸಬೇಕು.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....