Kannada essays

ಅಸಹಿಷ್ಣುತೆ ಮತ್ತು ಕೋಮುವಾದ ಪ್ರಬಂಧ-9 | Unveiling The Harsh Truths Of Intolerance And Communalism

Table of Contents

ಅಸಹಿಷ್ಣುತೆ ಮತ್ತು ಕೋಮುವಾದ | Intolerance & Communalism

ನಮ್ಮ ದೇಶದಲ್ಲಿ ಇತ್ತೀಚೆಗೆ ಎಲ್ಲೆಂದರಲ್ಲಿ ದಲಿತರ ಮೇಲೆ ದೌರ್ಜನ್ಯ ಧಾರ್ಮಿಕ ಗಲಭೆಗಳು, ಪ್ರಾದೇಶಿಕ ವೈಷಮ್ಯಗಳು, ಆಹಾರ ಪದ್ಧತಿಯಲ್ಲೂ ಈ ‘ಇಸಂ’ಗಳು ಕಾಣುತ್ತಿವೆ. ನರೇಂದ್ರ ದಾಬೋಲ್ಕರ್’ ಹತ್ಯೆ, ಪಾನ್ಸರೆಯವರ ದುರ್ಮರಣ, ನಮ್ಮ ರಾಜ್ಯದ ವಿಚಾರವಂತ ಸಾಹಿತಿಗಳಾದ ಎಂ.ಎಂ.ಕಲಬುರ್ಗಿಯವರನ್ನು ಕೆಲವರು ಧರ್ಮ, ಜಾತಿಯ, ವಿಚಾರವಾದದ ವೈರುದ್ಯವಾಗಿ ಕೊಲೆಗೈದಿರುವುದು ಅಸಹಿಷ್ಣುತೆ ಹೆಚ್ಚಿರುವುದನ್ನು ಸೂಚಿಸುತ್ತದೆ.

ಗೀತೆಯನ್ನು ಭಾರತದ ಧರ್ಮಗ್ರಂಥವೆಂದು ಘೋಷಿಸುವುದು, ಗೋಹತ್ಯೆ ನಿಷೇದ ಮಾಡುವುದು, ಘರ್ ವಾಪಸಿಯಂತಸ ಕಾರಕ್ರಮಗಳು ಸರ್ಕಾರದಲ್ಲಿರುವವರ ವಿಚಾರಗಳಾಗಿದ್ದು ಕೆಲವು ಕಡೆ ಸಾಹಿತಿಗಳನ್ನು, ಬರಹಗಾರರನ್ನು, ಪರಿಸರವಾದಿಗಳನ್ನು ನಿರ್ಬಂದಿಸಿರುವ ಸರ್ಕಾರದ ಈ ವಿಚಾರಗಳು ಅಸಹಿಷ್ಣುತೆಯನ್ನು ಸೂಚಿಸುತ್ತವೆ. ಧಾರ್ಮಿಕ ಮೂಲಭೂತವಾದ ಮಾಡುವವರನ್ನು ಹಾಗೂ ಕೆಲ ಪಂಥೀಯರ ವಿರುದ್ಧ ಬರಹಗಳನ್ನು ಬರೆದರೂ ಅವರ ವಿರುದ್ಧ ಕೆಲವು ಸಂಘಟನೆಗಳು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ಬರಹಗಾರನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯನ್ನು ತಂದೊಡ್ಡುತ್ತವೆ. ಯಾವ ದೇಶಗಳಲ್ಲೂ ಇಲ್ಲದಷ್ಟು ಜಾತಿ ಮತ್ತು ಧಾರ್ಮಿಕ ಗಲಭೆಗಳು ನಮ್ಮಲ್ಲಿ ನಡೆಯುತ್ತಿರುತ್ತವೆ.

ಅಸಹಿಷ್ಣುತೆ ಎಂಬ ಪದವು ಇಂಗ್ಲೀಷಿನ Intollerance ಎಂಬ ಪದದ ಕನ್ನಡದ ರೂಪವಾಗಿದ್ದು ಇದಕ್ಕೆ ‘ಸಹಿಸಿಕೊಳ್ಳಲು ಸಾಧ್ಯವಾಗದ್ದು’ ಎಂಬ ಅರ್ಥವಿದೆ. ಓರ್ವನ ಅಭಿವ್ಯಕ್ತಿಯನ್ನು, ಭಾವನೆಯನ್ನು, ಹೇಳಿಕೆಯನ್ನು, ವಿಚಾರವಾದವನ್ನು, ಮನಸ್ಸನ್ನು ಒಪ್ಪಿಕೊಳ್ಳದೆ ಅವರಿಗೆ ಪ್ರತಿರೋಧ ವ್ಯಕ್ತಪಡಿಸುವುದು ಅವರ ಮೇಲೆ ಹಲ್ಲೆ ನಡೆಸುವುದು, ದೌರ್ಜನ್ಯ ಎಸಗುವುದು, ಸಾಯಿಸುವ ಉದ್ದೇಶದಿಂದ ಗುಂಡು ಹಾರಿಸುವುದು, ನಿಂದನೆ ಮಾಡುವುದನ್ನು ನಾವು ಇಂಟಾಲೆರೆನ್ಸ್ ಎಂದು ಕರೆಯಬಹುದು.

ಕೋಮುವಾದವು ಜನರನ್ನು ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ವಿಭಜಿಸುತ್ತದೆ. ಕೋಮುವಾದವು ವ್ಯಕ್ತಿಯೋರ್ವನು ತನ್ನ ಸಮುದಾಯಕ್ಕೆ ನಿಷ್ಠೆ ತೋರುವುದು ಎಂಬ ಅರ್ಥವನ್ನು ನೀಡುತ್ತದೆ. ಇನ್ನು ಹೇಳುವುದಾದರೆ ಒಂದು ನಿರ್ದಿಷ್ಟ ಸಮುದಾಯ ಅಥವಾ ಧರ್ಮದೆಡೆಗೆ ಒಬ್ಬ ವ್ಯಕ್ತಿಗೆ ಇರುವ ಅತಿಯಾದ ವ್ಯಾಮೋಹ ಮತ್ತು ಅಂಧಶ್ರದ್ಧೆಯನ್ನು ಕೋಮುವಾದ ಎಂದು ಕರೆಯಬಹುದು.

ಒಂದು ಸಮೂಹ ತನ್ನ ರಾಜಕೀಯ, ಆರ್ಥಿಕ, ಸಾಮಾಜಿಕ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಧರ್ಮವನ್ನು ಬಳಸಿಕೊಳ್ಳುವುದು ಕೂಡ ಕೋಮುವಾದವಾಗುತ್ತದೆ.

ಕೋಮುವಾದ

ದೇಶದಲ್ಲಿ ಕೋಮುವಾದದ ಬೆಳವಣಿಗೆಗೆ ಕಾರಣಗಳು:

ಪ್ರಸ್ತುತ ಸಮಾಜದಲ್ಲಿ ಅನೇಕ ವಿಷಯಗಳು ಮತ್ತು ಶಕ್ತಿಗಳು ಅಸಹಿಷ್ಣುತೆ ಮತ್ತು ಕೋಮುವಾದ ಬೆಳೆಯಲು ಪ್ರೋತ್ಸಾಹಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳು-

1) ಕೋಮುವಾದಿ ಸಂಘಟನೆಗಳು ಹಾಗೂ ಅವುಗಳ ತಾತ್ವಿಕತೆ

2) ಧಾರ್ಮಿಕ ಮೂಲಭೂತವಾದ ಮತ್ತು ಪಂಥಗಳು

3) ಚುನಾವಣಾ ರಾಜಕೀಯ ಮತ್ತು ದ್ವೇಷ

4) ಅಲ್ಪಸಂಖ್ಯಾತರ ಆರ್ಥಿಕ ಹಿನ್ನೆಡೆ

5) ತಿರುಚಿದ ಇತಿಹಾಸ ಮತ್ತು ಇತಿಹಾಸ ಬರಹಗಳು

6) ಪ್ರತ್ಯೇಕತಾ ಮನೋಭಾವ

ಅಸಹಿಷ್ಣುತೆ ಮತ್ತು ಕೋಮುವಾದದ ಪರಿಣಾಮಗಳು:

1) ಭಾರತದ ಆರ್ಥಿಕ, ಸಾಮಾಜಿಕ ಅನಭಿವೃದ್ಧಿಗೆ ಮೂಲಕಾರಣವಾಗಿರುವುದು ಅಸಹಿಷ್ಣುತೆ ಮತ್ತು ಕೋಮುವಾದ.

2) ಸಿನಿಮಾ, ಸಾಹಿತ್ಯ ರಚನೆ, ರಾಜಕೀಯ ಪಕ್ಷಗಳು ಮುಂತಾದ ಎಲ್ಲಾ ರಂಗಗಳಲ್ಲಿಯೂ ಕೋಮುವಾದದ ಪ್ರಭಾವವನ್ನು ಕಾಣಬಹುದು.

3) ಸಮಾಜದಲ್ಲಿ ಅಶಾಂತಿ ನೆಲೆಸಲು ಇದು ಪ್ರಮುಖ ಕಾರಣವಾಗುತ್ತದೆ.

ಧಾರ್ಮಿಕ ಕೋಮು ಗಲಭೆಗಳು ಹಾಗೂ ವೈಷಮ್ಯಗಳು ನೆಲೆಸಿ ಸಮಾಜವನ್ನು ಅಶಾಂತಿಗೆ ತಳ್ಳುತ್ತವೆ.

4) ಮತಾಂತರ, ಫರ್‌ವಾಪಸಿಯಂತಹ ಕೆಲವು ಕಾರ್ಯಕ್ರಮಗಳು ಈ ಕೋಮುವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕೃತ್ಯಗಳು.

5) ಇಂದು ವಿಶ್ವವನ್ನು ಆತಂಕಕ್ಕೆ ತಳ್ಳಿರುವ ಭಯೋತ್ಪಾದನಾ ಕೃತ್ಯಗಳು ಹಾಗೂ ISISನಂತಹ ಸಂಘಟನೆಗಳು ಸಹ ಈ ಕೋಮುವಾದದ ಪ್ರತಿಫಲಗಳು,

6) ವೈಚಾರಿಕತೆ ಮತ್ತು ವೈಜ್ಞಾನಿಕತೆ ಮುಂತಾದ ವಿಚಾರಗಳು ಸಮಾಜದಲ್ಲಿ ಕಾಣೆಯಾಗಿ ಅಶಾಂತಿ ನೆಲೆಸಿ ರೋಗಗ್ರಸ್ತ ಸಮಾಜ ನಿರ್ಮಾಣವಾಗುತ್ತದೆ.

7) ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯಾಂಗ, ಶಾಸಕಾಂಗ ವ್ಯವಸ್ಥೆಗಳು ಸಹ ಕೋಮುವಾದಕ್ಕೆ ಬಲಿಯಾಗಿ ಮುರಿದುಬೀಳುವ ಸಂಭವವಿದೆ. ಸಿರಿಯಾದಲ್ಲಿ ISISನಿಂದ ಆದ ಘಟನೆಯನ್ನು ಸ್ಮರಿಸಬಹುದು. ಉದಾ:

8) ಅಸೂಯೆ, ಸ್ವಾರ್ಥ, ಅಮಾನವೀಯತೆ ಹಾಗೂ ಧಾರ್ಮಿಕ ವೈಷಮ್ಯಗಳು ಬೆಳೆದು ಸಮಾಜವನ್ನು ನಾಶ ಮಾಡುವ ಹಂತಕ್ಕೆ ಈ ಕೋಮುವಾದ, ಅಸಹಿಷ್ಣುತೆ, ತಂದರೂ ಅಡ್ಡಿಯಿಲ್ಲ.

9) ಅಸಹಿಷ್ಣುತೆಯಿಂದ ಬರಹಗಾರನ ಅಭಿವ್ಯಕ್ತಿ ನಾಶವಾಗುತ್ತದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯ ನಾಶವಾಗುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.

10) ಅಲ್ಪಸಂಖ್ಯಾತರು, ಬಹು ಸಂಖ್ಯಾತರಿಂದ ಹಿಂಸೆ, ನೋವು, ಅವಮಾನವನ್ನು ಅನುಭವಿಸಬೇಕಾಗುತ್ತದೆ. ಅಸಹಿಷ್ಣುತೆಯಿಂದ ಸೃಜನಶೀಲತೆ, ಕ್ರಿಯಾಶೀಲ ಚಿಂತನೆ, ವಿಭಿನ್ನ ಯೋಚನೆಗಳು ಮರೆಯಾಗುತ್ತವೆ.

11) ಅಸಹಿಷ್ಣುತೆ ಎಂಬುದು ತಿನ್ನುವ ಆಹಾರ ಪದ್ಧತಿ, ಬಳಸುವ ಆಚರಣೆ, ತೊಡುವ ಬಟ್ಟೆಯ ತನಕ ವ್ಯಾಪಿಸಿ ಜನರ ಖಾಸಗಿ ವಿಚಾರಕ್ಕೆ ಕೈಹಾಕುವುದು ಒಂದು ಘೋರ ದುರಂತವಾಗಿದೆ.

12) ಅಸಹಿಷ್ಣುತೆ ಎಂಬುದು ಎಡಪಂಥ ಮತ್ತು ಬಲಪಂಥಿಯರಿಗೆ, ಮಾಧ್ಯಮದವರಿಗೆ, ರಾಜಕಾರಣಿಗಳಿಗೆ, ಕ್ರೀಡಾಳುಗಳಿಗೆ, ಸಮಾಜದ ಮುಖ್ಯವಾಹಿನಿಯವರಿಗೆ ಮುಜುಗರ ಉಂಟು ಮಾಡುತ್ತದೆ. ಅಲ್ಲದೆ ದೇಶದಲ್ಲಿರುವ ಎಲ್ಲರಲ್ಲಿಯೂ ಕೋಮುಭಾವನೆಯನ್ನು ಪ್ರಚೋದಿಸುತ್ತದೆ.

ಕೋಮುವಾದ

ಕೋಮುವಾದವನ್ನು ತಡೆಯಲು ಅನುಸರಿಸಬೇಕಾದ ಮಾರ್ಗಗಳು:

1) ಶಾಂತಿ ಸಭೆಗಳನ್ನು ನಡೆಸುವುದು.

2) ಜಾತ್ಯಾತೀತ, ಧರ್ಮಾತೀತ ಅಧಿಕಾರಿಗಳ ನೇಮಕ ಮಾಡುವುದು.

3) ಸಮೂಹ ಮಾಧ್ಯಮಗಳ ಸಹಕಾರವನ್ನು ಪಡೆಯುವುದು.

4) ಕಠಿಣ ಶಿಕ್ಷೆಯನ್ನು ನೀಡುವುದು.

5) ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವುದು. 6) ಧರ್ಮವನ್ನು ರಾಜಕಾರಣದಿಂದ ವಿಭಾಗಿಸುವುದು.

7) ಕಾನೂನು ಪಾಲನೆಯನ್ನು ರಾಜಕೀಯ ಮುಕ್ತ ಮಾಡುವುದು.

8) ಎಚ್ಚರಿಕೆ ಕ್ರಮ ಕೈಗೊಳ್ಳುವುದು.

9) ಶಿಕ್ಷಣದಲ್ಲಿ ಧರ್ಮ ನಿರಪೇಕ್ಷತೆ ನೀಡುವುದು.

10) ಶೈಕ್ಷಣಿಕ ಸಂಸ್ಥೆಗಳ ಪಾತ್ರದ ಮಹತ್ವ. 1l) ಧಾರ್ಮಿಕ ಸ್ಥಳಗಳ ಮೇಲೆ ಹದ್ದಿನ ಕಣ್ಣು.

12) ಬಲವಂತದ ಮತಾಂತರ ನಿಷೇಧ ಮಾಡುವುದು.

13) ಧರ್ಮದ ನಿಜವಾದ ಅರ್ಥೈಸುವಿಕೆ.

14) ರಾಷ್ಟ್ರೀಯ ಭಾವುಕತೆ ಬೆಳೆಸುವುದು.

15) ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು.

ಭಾರತದಲ್ಲಿ ಕೋಮುವಾದದ ಬೆಳವಣಿಗೆಗೆ ಕಾರಣಗಳು:

ಸಮಕಾಲೀನ ಭಾರತದಲ್ಲಿ ಅನೇಕ ಅಂಶಗಳು ಮತ್ತು ಶಕ್ತಿಗಳು ಕೋಮುವಾದದ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.

1) ಅಲ್ಪಸಂಖ್ಯಾತರ ಆರ್ಥಿಕ ಹಿನ್ನೆಡೆ:

ಬ್ರಿಟಿಷ್ ಆಡಳಿತದಲ್ಲಿ ಭಾರತೀಯ ಮುಸ್ಲಿಮರು ಹಿಂದೂಗಳಿಗಿಂತ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದರು. ಸ್ವಾತಂತ್ರ್ಯಾ ನಂತರ ಎಲ್ಲರಿಗೂ ಸಮಾನಾವಕಾಶವನ್ನು ನೀಡಿದರೂ ಮುಸ್ಲಿಮರು ಅದನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲವಾದ್ದರಿಂದ ಅವರ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಅಂತಹ ಗಮನಾರ್ಹ ಬದಲಾವಣೆ ಕಂಡುಬರಲಿಲ್ಲ.

ಇದರ ಪರಿಣಾಮವಾಗಿ ಉಂಟಾದ ಆರ್ಥಿಕ ಅಸಮಾನತೆಯು ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಅಂತರ ಮತ್ತು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ. ಹಿಂದೂಗಳು ಎಲ್ಲ ಅವಕಾಶಗಳನ್ನು ಕಬಳಿಸುತ್ತಿರುವುದೇ ತಮ್ಮ ಹಿಂದುಳಿಯುವಿಕೆಗೆ ಕಾರಣ ಎಂಬ ಭಾವನೆ ಮುಸ್ಲಿಂ ಸಮುದಾಯದಲ್ಲಿ ಮೂಡಿದೆ. ಹೀಗೆ ಮುಸ್ಲಿಮರ ಆರ್ಥಿಕ ಹಿನ್ನಡೆಯೂ ಕೂಡ ಭಾರತದಲ್ಲಿ ಕೋಮುವಾದದ ಬೆಳವಣಿಗೆಗೆ ಕಾರಣವಾಯಿತು ಎಂಬುದು ಕೆಲವರ ವಾದವಾಗಿದೆ.

2) ಕೋಮುವಾದಿ ಸಂಘಟನೆಗಳು ಮತ್ತು ಇವುಗಳ ತಾತ್ವಿಕತೆ:

ಈ ಸಂಘಟನೆಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ನಿರ್ಲಕ್ಷಿಸಿ ಮತೀಯ ಹಾಗೂ ಧಾರ್ಮಿಕ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುತ್ತಿವೆ. ಈ ಸಂಘಟನೆಗಳ ನಾಯಕರು ಸ್ವಾರ್ಥಪರವಾದ ಸಂಕುಚಿತ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಉದ್ರೇಕಕಾರಿ ಸಾಹಿತ್ಯ ಹಾಗೂ ಭಾಷಣಗಳ ಮೂಲಕ ವಿವಿಧ ಧರ್ಮೀಯರ ನಡುವೆ ಅದರಲ್ಲೂ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯವನ್ನು ಪ್ರಚೋದಿಸುತ್ತವೆ ಎಂದು ಅಭಿಪ್ರಾಯಪಡಲಾಗಿದೆ.

3) ಧಾರ್ಮಿಕ ಮೂಲಭೂತವಾದ ಮತ್ತು ಪಂಥಗಳು:

ಹಿಂದು, ಮುಸ್ಲಿಂ, ಸಿಖ್, ಕ್ರೈಸ್ತ ಧರ್ಮಗಳು ಧಾರ್ಮಿಕ ಮೂಲಭೂತವಾದಿಗಳ ಕಪಿಮುಷ್ಟಿಗೆ ಸಿಲುಕಿ ನರಳುತ್ತಿವೆ. ಧರ್ಮಗಳನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ವಿವಿಧ ಧರ್ಮೀಯರ ನಡುವೆ ದ್ವೇಷದ ಬೀಜವನ್ನು ಬಿತ್ತುವುದರ ಮೂಲಕ ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುತ್ತಿದ್ದಾರೆ.

ಹಿಂದೂ ಮೂಲಭೂತವಾದಿಗಳು ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂ ಮೂಲಭೂತವಾದಿಗಳು ಜಿಹಾದ್ (ಪವಿತ್ರ ಯುದ್ಧ) ಹೆಸರಿನಲ್ಲಿಯೂ ಎರಡೂ ಸಮುದಾಯಗಳ ನಡುವೆ ಘರ್ಷಣೆಗೆ ಪ್ರಚೋದಿಸುತ್ತಿದ್ದಾರೆ. 1992ರ ಬಾಬ್ರಿ ಮಸೀದಿ ಪ್ರಕರಣ, ಗುಜರಾತಿನ ಗೋದ್ರಾ ನರಹತ್ಯೆ, 1984ರ ಸಿಬ್ಬರ ಹತ್ಯಾಕಾಂಡ, ಮುಂಬೈ ಸರಣಿ ಬಾಂಬ್‌ ಸ್ಫೋಟ ಮುಂತಾದ ಕೋಮು ಗಲಭೆಗಳಲ್ಲಿ ಧಾರ್ಮಿಕ ಮೂಲಭೂತವಾದಿಗಳ ಕೈವಾಡವಿದೆಯೆಂದು ಶಂಕಿಸಲಾಗಿದೆ.

4) ಚುನಾವಣಾ ರಾಜಕೀಯ ಮತ್ತು ದ್ವೇಷ:

ಇಂದು ಪ್ರತಿಯೊಂದು ಪಕ್ಷವು ಧರ್ಮವನ್ನು ಬಳಸಿಕೊಳ್ಳುವುದರ ಮೂಲಕ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿದೆ. ಇಂದಿನ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಪ್ರಚಾರಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಕೋಮುವಾದದ ಬೆಳವಣಿಗೆಯ ಕಾರಣಗಳಲ್ಲೊಂದಾಗಿದೆ. 1989-90ರ ಮಹಾರಾಷ್ಟ್ರ ಲೋಕಸಭೆ ಹಾಗೂ ವಿಧಾನ ಸಭೆಗಳ ಚುನಾವಣಾ ಪ್ರಚಾರದುದ್ದಕ್ಕೂ ಬಿ.ಜೆ.ಪಿ.-ಶಿವಸೇನೆ ಮೈತ್ರಿಕೂಟವು “ಹಿಂದುತ್ವ” ಹಾಗೂ ಮುಸ್ಲಿಂ ವಿರೋಧಿ ಮಂತ್ರವನ್ನು ಬಳಸಿಕೊಂಡಿತು ಎಂಬುದಾಗಿ ವಿಶ್ಲೇಷಿಸಲಾಗಿದೆ.

1992 ನಂತರವಂತೂ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಪ್ರಕರಣವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿದ್ದನ್ನು ನೆನೆಯಬಹುದು. ರಾಮಜನ್ಮಭೂಮಿ ಪ್ರಕರಣವನ್ನು ಚುನಾವಣಾ ಅಸ್ತ್ರವನ್ನಾಗಿ ಪರಿವರ್ತಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿಯು ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸಕ್ಕೆ ಸಂಬಂಧಿಸಿದ ಮೆರವಣಿಗೆಗಳನ್ನು ಏರ್ಪಡಿಸಿತು.

ಹಿಂದೂಗಳ ಮತಗಳನ್ನು ಸೆಳೆಯುವ ಈ ತಂತ್ರಗಾರಿಕೆ ಹಿಂದೂ ಮುಸ್ಲಿಮರ ನಡುವೆ ಕೋಮು ಗಲಭೆಯನ್ನು ಉಂಟುಮಾಡಿತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಉದ್ದೇಶಪೂರ್ವಕವಾಗಿಯೇ ಕೋಮುಗಲಭೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ದಮನ ಮಾಡಲು ಕಾಂಗ್ರೆಸ್‌ ಪ್ರಯತ್ನಿಸಲಿಲ್ಲ ಎಂಬ ಭಾವನೆಯನ್ನು ಹಿಂದೂಗಳಲ್ಲಿಯೂ, ಕೋಮು ಹಿಂಸೆಗೆ ಬಿ.ಜೆ.ಪಿ.ಯೇ ಕಾರಣ ಹಾಗೂ ಕಾಂಗ್ರೆಸ್‌ ಪಕ್ಷ ಮಾತ್ರ ತಮ್ಮನ್ನು ರಕ್ಷಿಸಬಲ್ಲದು ಎಂಬ ಭಾವನೆಯನ್ನು ಮುಸ್ಲಿಮರಲ್ಲಿಯೂ ಉಂಟುಮಾಡುವುದರ ಮೂಲಕ ಎರಡೂ ಸಮುದಾಯಗಳ ಮತಗಳನ್ನು ಆಕರ್ಷಿಸುವುದು ಕಾಂಗ್ರೆಸ್ ಪಕ್ಷದ ಈ ತಂತ್ರಗಾರಿಕೆಯ ಹಿಂದಿನ ಉದ್ದೇಶವಾಗಿತ್ತು ಎಂದು ವಿಶ್ಲೇಷಿಸಲಾಯಿತು. ಚುನಾವಣೆಗೆ ಸ್ವಲ್ಪ ತಿಂಗಳು ಮುಂಚಿತವಾಗಿ ಕಾಂಗ್ರೆಸ್ ಸರ್ಕಾರವು ‘ಉರ್ದು’ವನ್ನು ಉತ್ತರ ಪ್ರದೇಶದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿತು. ಮುಸ್ಲಿಮರ ಮತಗಳಿಸುವ ಕಾಂಗ್ರೆಸ್ಸಿನ ಈ ನೀತಿ “ಬದೌನ್”ನಲ್ಲಿ ಕೋಮುಗಲಭೆಯನ್ನುಂಟು ಮಾಡಿತು ಎಂದು ವಿಶ್ಲೇಷಿಸಲಾಯಿತು.

5) ತಿರುಚಿದ ಇತಿಹಾಸ ಮತ್ತು ಇತಿಹಾಸ ಬರಹಗಳು:

ಕೆಲವು ಪತ್ರಿಕೆಗಳು ವಿವಿಧ ಧರ್ಮೀಯರ ನಡುವೆ ಚಿಕ್ಕ ಪುಟ್ಟ ಕಾರಣಗಳಿಗಾಗಿ ನಡೆಯುವ ಸಣ್ಣ ಜಗಳಗಳಿಗೆ ಧರ್ಮದ ಬಣ್ಣ ಹಚ್ಚುವ ಮೂಲಕ ಕೋಮುಗಲಭೆಯನ್ನುಂಟು ಮಾಡುತ್ತವೆ. ಕೆಲವು ಇತಿಹಾಸಕಾರರು ಏಕಪಕ್ಷೀಯವಾಗಿ ಇತಿಹಾಸ ರಚಿಸುವುದರ ಮೂಲಕ ವಿವಿಧ ಧರ್ಮೀಯರ ನಡುವೆ ದ್ವೇಷವನ್ನು ಮೂಡಿಸುತ್ತಾರೆ.

ಅಲ್ಲಾವುದ್ದೀನ್ ಖಿಲ್ಲಿ, ಮಹಮದ್ ಘಜಿ, ಮಹಮದ್ ಬಿನ್ ತುಘಲಕ್, ಔರಂಗಜೇಬ್ ಮುಂತಾದ ಮುಸ್ಲಿಂ ದೊರೆಗಳನ್ನು ಹಿಂದೂ ಧರ್ಮದ ವಿರೋಧಿಗಳೆಂದು ಚಿತ್ರಿಸುತ್ತಾರೆ. ಹಿಂದೂ ಧರ್ಮವನ್ನು ನಾಶ ಮಾಡುವ ಉದ್ದೇಶದಿಂದಲೇ ಈ ದೊರೆಗಳು ಭಾರತದ ಮೇಲೆ ದಾಳಿ ನಡೆಸಿದರು ಎಂಬುದಾಗಿ ಬರೆಯುತ್ತಾರೆ. ಮಹಮದ್‌ ಘಜಿ, ಮಹಮದ್‌ ಘೋರಿ, ಮಲ್ಲಿಕಾಫರ್ ಮುಂತಾದ ಮುಸಲ್ಮಾನ್ ದಾಳಿಕಾರರನ್ನು ವಿಗ್ರಹ ಭಂಜಕರೆಂದು ಚಿತ್ರಿಸುತ್ತಾರೆ.

ಆದರೆ ಅವರು ವಿಗ್ರಹಗಳನ್ನು ಭಗ್ನಗೊಳಿಸಲು ಧಾರ್ಮಿಕ ಕಾರಣಕ್ಕಿಂತ ಆರ್ಥಿಕ ಕಾರಣವೇ ಪ್ರಧಾನವಾಗಿತ್ತು ಹಾಗೂ ಅವರ ಧಾಳಿಯ ಉದ್ದೇಶ ಹಿಂದೂ ಧರ್ಮದ ವಿನಾಶಕ್ಕಿಂತ ಭಾರತದ ಸಂಪತ್ತನ್ನು ಲೂಟಿ ಹೊಡೆಯುವುದಾಗಿತ್ತು ಎಂಬ ಇತಿಹಾಸದ ಇನ್ನೊಂದು ಮುಖವನ್ನು ಮುಚ್ಚಿಡುತ್ತಾರೆ.

ಟಿಪ್ಪುಸುಲ್ತಾನ್ ಹಾಗೂ ಹೈದರಾಲಿಯಂಥಹ ಸುಲ್ತಾನರು ನಂಜನಗೂಡಿನ ನಂಜುಂಡೇಶ್ವರನ ಭಕ್ತರಾಗಿದ್ದರು ಎಂಬ ವಿಷಯವನ್ನಾಗಲೀ, ಟಿಪ್ಪುಸುಲ್ತಾನನು ಶೃಂಗೇರಿ ಮಠಕ್ಕೆ ಕೆಲವು ಸಂದರ್ಭಗಳಲ್ಲಿ ರಕ್ಷಣೆ ನೀಡಿದ್ದನು ಎಂಬ ವಿಷಯವನ್ನಾಗಲೀ ಎಲ್ಲ ಇತಿಹಾಸಕಾರರು ಉಲ್ಲೇಖಿಸುವುದಿಲ್ಲ.

ಹಿಂದೂ ಸಂಸ್ಕೃತಿಗೆ ಮುಸ್ಲಿಂ ದೊರೆಗಳು ನೀಡಿದ ಕೊಡುಗೆಯನ್ನು ಇವರು ಇತಿಹಾಸ ಪಠ್ಯಪುಸ್ತಕದಲ್ಲಿ ದಾಖಲಿಸುವುದಿಲ್ಲ. ಇದು ಹಿಂದೂ ಧರ್ಮೀಯರಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಮುಸ್ಲಿಂ ಸಮುದಾಯದೆಡೆಗೆ ದ್ವೇಷವನ್ನು ಬೆಳೆಸುತ್ತದೆ ಎಂಬ ಅಭಿಪ್ರಾಯವಿದೆ.

ಮುಸ್ಲಿಂ ಇತಿಹಾಸಕಾರರು ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎಂಬ ಅಭಿಪ್ರಾಯ ಇದೆ. ಪಾಕಿಸ್ತಾನದ ಇತಿಹಾಸಕಾರರು ಹಿಂದೂ ರಾಜರುಗಳನ್ನು ಮುಸ್ಲಿಂ ವಿರೋಧಿಗಳೆಂಬಂತೆ ಚಿತ್ರಿಸುತ್ತಾರೆ. ಮಹಮದ್ ಬಿನ್ ಖಾಸಿಮ್, ಮಹಮದ್ ಘಜಿ, ಮಹಮದ್‌ ಘೋರಿ ಮುಂತಾದ ಮುಸ್ಲಿಂ ದೊರೆಗಳನ್ನು ಈ ಇತಿಹಾಸಕಾರರು ಕಾಫೀರರನ್ನು ನಾಶ ಮಾಡಿದ ಮಹಾನ್ ದೊರೆಗಳೆಂದು ವೈಭವೀಕರಿಸುತ್ತಾರೆ.

ಇದು ಸ್ವಾಭಾವಿಕವಾಗಿಯೇ ಹಿಂದೂಗಳ ಭಾವನೆಯನ್ನು ಮುಸ್ಲಿಮರ ವಿರುದ್ಧ ಕೆರಳುವಂತೆ ಪ್ರಚೋದಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಈ ಪಠ್ಯ ಪುಸ್ತಕಗಳು ವಿದ್ಯಾರ್ಥಿ ದೆಸೆಯಿಂದಲೇ ಧಾರ್ಮಿಕ ಸಹಿಷ್ಣುತೆಯ ಬದಲು ಕೋಮುವಾದದ ವಿಷಬೀಜವನ್ನು ಬಿತ್ತುವ ಸಾಧ್ಯತೆಗಳಿರುತ್ತವೆ.

6) ಪ್ರತ್ಯೇಕತೆಯ ಮನೋಭಾವನೆ:

ಕೆಲವು ಸಂಘಟನೆಗಳು ಮುಸ್ಲಿಂ ಸಮುದಾಯದಲ್ಲಿ ಪ್ರತ್ಯೇಕತೆಯ ಮನೋಭಾವನೆಯನ್ನು ಬೆಳೆಸುತ್ತಿವೆ ಎಂದು ಹೇಳಲಾಗುತ್ತಿದೆ. ಹಿಂದು ಹಾಗೂ ಮುಸ್ಲಿಮರ ಸಂಸ್ಕೃತಿ, ಆಚಾರ, ವಿಚಾರ, ಧರ್ಮಗಳು ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಈ ಎರಡೂ ಸಮುದಾಯದ ಜನರ ನಡುವೆ ಶಾಂತಿಯುತ ಸಹಬಾಳ್ವೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸುವುದರ ಮೂಲಕ ಈ ಸಂಘಟನೆಗಳು ಮುಸ್ಲಿಮರಲ್ಲಿ ಪ್ರತ್ಯೇಕತಾ ಮನೋಭಾವನೆಯನ್ನು ಬೆಳೆಸುತ್ತವೆ ಎಂದು ವಿಶ್ಲೇಷಿಸಲಾಗಿದೆ.

ಸರ್ಕಾರಿ ಉದ್ಯೋಗ, ವ್ಯಾಪಾರ, ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮುಂತಾದ ಆಧುನಿಕತೆಯ ಸೌಲಭ್ಯಗಳಿಂದ ಮುಸ್ಲಿಮರು ವಂಚಿತರಾಗಿರುವುದಕ್ಕೆ ಹಿಂದೂಗಳೇ ಕಾರಣ ಎಂಬುದಾಗಿ ಈ ಸಂಘಟನೆಗಳು ಆರೋಪಿಸುತ್ತಿವೆ. ಬಹುಸಂಖ್ಯಾತ ಹಿಂದೂಗಳು ಸರ್ಕಾರದ ಮೇಲೆ ಪ್ರಭಾವ ಬೀರುವುದರ ಮೂಲಕ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಡೆಗಣಿಸುವಂತೆ ಮಾಡಿದ್ದಾರೆ ಎಂಬ ಹುಸಿ ನಂಬಿಕೆಯನ್ನು ಮುಸ್ಲಿಂ ಸಮುದಾಯದಲ್ಲಿ ಮೂಡಿಸಲು ಈ ಸಂಘಟನೆಗಳು ಪ್ರಯತ್ನಿಸುತ್ತಿವೆ. ಇದರಿಂದ ಸರ್ಕಾರ ತಮ್ಮೆಡೆಗೆ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಮುಸ್ಲಿಮರ ನಂಬಿಕೆ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಕೋಮುವಾದ

ಪರಿಹಾರೋಪಾಯಗಳು:

ಕೋಮುವಾದವು ಎಷ್ಟು ಅಪಾಯಕಾರಿಯಾದದ್ದು ಮತ್ತು ಅಭಿವೃದ್ಧಿಯ ಶತೃ ಎಂಬುದು ಈ ಮೇಲಿನ ಚರ್ಚೆಯಿಂದ ತಿಳಿದು ಬರುತ್ತದೆ. ಕೋಮುವಾದದ ನಿಗ್ರಹಕ್ಕೆ ಈ ಕೆಳಗಿನ ಪರಿಹಾರೋಪಾಯಗಳನ್ನು ನೀಡಬಹುದು.

1) ಶಾಂತಿ ಸಮಿತಿಗಳು:

ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳಲ್ಲಿ ಶಾಂತಿ ಸಮಿತಿಗಳನ್ನು ರಚಿಸುವುದರ ಮೂಲಕ ಕೋಮುವಾದವನ್ನು ನಿಗ್ರಹಿಸಬಹುದು. ಈ ಸಮಿತಿಗಳು ಎಲ್ಲ ಜಾತಿ, ಧರ್ಮಗಳಿಗೆ ಸೇರಿದ ಜನರನ್ನು ಒಳಗೊಂಡಿರಬೇಕು. ಈ ಸಮಿತಿಯ ಸದಸ್ಯರು ಒಟ್ಟಿಗೆ ಸೇರಿ ಕೆಲಸ ಮಾಡುವ ಮೂಲಕ ಎಲ್ಲ ಧರ್ಮೀಯರ ನಡುವೆ ಸದ್ಭಾವನೆ ಹಾಗೂ ಭ್ರಾತೃತ್ವ ಮನೋಭಾವನೆಯನ್ನು ಬೆಳೆಸಬೇಕು. ಅಲ್ಲದೆ ಈ ಸಮಿತಿಗಳು ಕೋಮುಗಲಭೆ ಪೀಡಿತ ಪ್ರದೇಶಗಳ ಜನರಲ್ಲಿನ ಕೋಮುಭೀತಿ ಮತ್ತು ದ್ವೇಷದಂತಹ ಭಾವನೆಗಳನ್ನು ನಿವಾರಿಸುವ ಮೂಲಕ ಕೋಮುವಾದವನ್ನು ನಿಗ್ರಹಿಸಲು ಮುಂದಾಗಬೇಕು.

2) ನಿಷ್ಪಕ್ಷಪಾತ ಹಾಗೂ ಜಾತ್ಯಾತೀತ ಮನೋಭಾವನೆಯ ಅಧಿಕಾರಿಗಳ ನೇಮಕ:

ಕೋಮುಗಲಭೆ ಉಂಟಾಗಬಹುದಾದ ಸೂಕ್ಷ್ಮ ಪ್ರದೇಶಗಳಿಗೆ ನಿಷಕ್ಷಪಾತ ಮತ್ತು ಜಾತ್ಯಾತೀತ ಮನೋಭಾವನೆಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅದರಲ್ಲೂ ವಿಶೇಷವಾಗಿ ಕಂದಾಯ ಹಾಗೂ ಪೋಲೀಸ್ ಇಲಾಖೆಗಳಿಗೆ ಇಂತಹ ಅಧಿಕಾರಿಗಳ ನೇಮಕ ಅಗತ್ಯ. ಇಂತಹ ಅಧಿಕಾರಿಗಳು ಕೋಮುಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದರ ಮೂಲಕ ಕೋಮುವಾದವನ್ನು ನಿಗ್ರಹಿಸಬಲ್ಲರು. ಅಲ್ಲದೆ ಇಂತಹ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಕೋಮು ಶಕ್ತಿಗಳು, ಭೀತಿಯಿಂದ ನಿಷ್ಕ್ರಿಯವಾಗುವ ಸಾಧ್ಯತೆಗಳೂ ಇರುತ್ತವೆ. ಒಂದು ವೇಳೆ ಕೋಮು ಭಾವನೆಯುಳ್ಳ ಅಧಿಕಾರಿಗಳನ್ನು ಸೂಕ್ಷ್ಮ ಪ್ರದೇಶಗಳಿಗೆ ನೇಮಿಸಿದರೆ ಅದು ಬೆಂಕಿಗೆ ತುಪ್ಪ ಸುರಿದಂತಾಗಿ ಕೋಮುದಳ್ಳುರಿ ಹೆಚ್ಚಲು ಕಾರಣವಾಗುತ್ತದೆ.

3) ಸಂವಹನ ಮಾಧ್ಯಮಗಳ ಸಹಕಾರ:

ರೇಡಿಯೋ, ಟಿ.ವಿ., ವರ್ತಮಾನ ಪತ್ರಿಕೆ ಮುಂತಾದ ಸಂವಹನ ಮಾಧ್ಯಮಗಳ ಸಹಕಾರವು ಕೋಮುವಾದವನ್ನು ನಿಗ್ರಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಮಾಧ್ಯಮಗಳು ತಮ್ಮ ವರದಿಗಳ ಮೂಲಕ ಕೋಮು ಜ್ವಾಲೆಯನ್ನು ಹರಡುವ ಬದಲು ನಂದಿಸಲು ಪ್ರಯತ್ನಿಸಬೇಕು. ಕೋಮುಗಲಭೆ ಉಂಟಾದ ಸಂದರ್ಭದಲ್ಲಿ ಈ ಮಾಧ್ಯಮಗಳು ಬಿತ್ತರಿಸುವ ವರದಿ, ವಾರ್ತೆ ಹಾಗೂ ಚರ್ಚೆಗಳು ವಿವಿಧ ಧರ್ಮೀಯರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಸೌಹಾರ್ದತೆಯನ್ನುಂಟು ಮಾಡಿ ಶಾಂತಿಯುತ ವಾತಾವರಣವನ್ನು ಮೂಡಿಸಬೇಕು. ಮಾಧ್ಯಮಗಳು ಕೋಮುಗಲಭೆಯಲ್ಲಿ ಸತ್ತವರ ಸಂಖ್ಯೆ, ಆಸ್ತಿ ಪಾಸ್ತಿಗೆ ಉಂಟಾದ ನಷ್ಟ ಮುಂತಾದ ವಿಷಯಗಳ ಬಗೆಗೆ ರೋಚಕವಾಗಿ ಊಹಾ ಮೋಹಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಮೂಲಕ ಕೋಮುವಾದದ ತೀವ್ರತೆಯನ್ನು ಹೆಚ್ಚಿಸಬಾರದು.

4) ಉಗ್ರ ಶಿಕ್ಷೆಯನ್ನು ನೀಡುವುದು:

ಕೋಮುಗಲಭೆಗಳಲ್ಲಿ ತೊಡಗುವವರಿಗೆ ಹಾಗೂ ಕೋಮುಗಲಭೆಗಳಿಗೆ ಪ್ರಚೋದನೆ ನೀಡುವವರಿಗೆ ಕರುಣೆ ತೋರದ ಸರ್ಕಾರ ಉಗ್ರ ಶಿಕ್ಷೆ ವಿಧಿಸಬೇಕು. ಆಗ ಕೋಮುಶಕ್ತಿಗಳು ಭಯದಿಂದಲಾದರೂ ಕೋಮುಗಲಭೆಯನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಕೈಬಿಡಬಹುದು. ಒಂದು ವೇಳೆ ಸರ್ಕಾರ ಕೋಮುಗಲಭೆಗೆ ಕಾರಣರಾದ ಅಪರಾಧಿಗಳನ್ನು ಲಘುವಾಗಿ ಪರಿಗಣಿಸಿದರೆ, ಈ ಗಲಭೆಗಳು ಅತ್ಯಂತ ಅಪಾಯಕಾರಿ ಸ್ವರೂಪವನ್ನು ತಾಳುವುದು ಖಂಡಿತ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು. ಪೊಲೀಸರು ಕೋಮು ಗಲಭೆಗೆ ಕಾರಣವಾದವರ ಬಗೆಗೆ ತನಿಖೆ ಮತ್ತು ವಿಚಾರಣೆ ನಡೆಸುತ್ತಿರುವ ಸಂದರ್ಭಗಳಲ್ಲಿ ರಾಜಕೀಯ ವ್ಯಕ್ತಿಗಳು ಮಧ್ಯ ಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಬೇಕು.

5) ಕೋಮು ಸಂಘಟನೆಗಳ ನಿಷೇಧ:

ಕೆಲವು ಸಂಘಟನೆಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಮುವಾದವನ್ನು ಪ್ರೋತ್ಸಾಹಿಸುತ್ತಿವೆ ಎಂದು ಅಭಿಪ್ರಾಯಪಡಲಾಗಿದೆ. ಈ ಸಂಘಟನೆಗಳ ನಾಯಕರು ತಮ್ಮ ಭಾಷಣಗಳು, ಲೇಖನಗಳು, ಸಭೆ ಸಮಾರಂಭಗಳು ಹಾಗೂ ಕ್ಯಾಲಿಗಳ ಮೂಲಕ ಮುಗ್ಧ ಜನರನ್ನು ಕೋಮುಗಲಭೆಗೆ ಪ್ರಚೋದನೆ ನೀಡುತ್ತವೆ. ಇಂತಹ ಸಂಘಟನೆಗಳು ಎಲ್ಲ ಧರ್ಮಗಳಲ್ಲಿಯೂ ಕಂಡುಬರಬಹುದು. ಸರ್ಕಾರ ಇಂತಹ ಸಂಘಟನೆಗಳನ್ನು ನಿಷೇಧಿಸುವುದರ ಮೂಲಕ ಕೋಮುವಾದದ ಬೆಳವಣಿಗೆಯನ್ನು ನಿಯಂತ್ರಿಸಬಹುದು.

6) ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು:

ಇಂದು ಧರ್ಮ ಹಾಗೂ ರಾಜಕಾರಣಗಳು ಪರಸ್ಪರ ಬೆಸೆದುಕೊಂಡಿರುವುದೂ ಕೋಮುವಾದದ ಬೆಳವಣಿಗೆಗೆ ಕಾರಣವಾಗಿದೆ. ಆದ್ದರಿಂದ ಧರ್ಮವನ್ನು ರಾಜಕಾರಣದಿಂದ ಸಂಪೂರ್ಣವಾಗಿ ಬೇರ್ಪಡಿಸಿದರೆ ಕೋಮುವಾದದ ಬೆಳವಣಿಗೆಯನ್ನು ತಡೆಗಟ್ಟಬಹುದು. ವಿವಿಧ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಚುನಾವಣಾ ಟಿಕೆಟ್‌ಗಳನ್ನು ನೀಡಬಾರದು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಧರ್ಮವನ್ನು ಬಳಸಬಾರದು. ಒಟ್ಟಾರೆ ಹೇಳುವುದಾದರೆ ವಿವಿಧ ರಾಜಕೀಯ ಪಕ್ಷಗಳು ಜಾತಿ ಅಥವಾ ಧರ್ಮವನ್ನು Vote Bank ಎಂದು ಪರಿಗಣಿಸುವ ಪ್ರವೃತ್ತಿಗೆ ಮಂಗಳ ಹಾಡಬೇಕು.

7) ಕಾನೂನು ಮತ್ತು ಶಿಸ್ತುಪಾಲನೆ ಯಂತ್ರವನ್ನು ರಾಜಕೀಯದಿಂದ ಮುಕ್ತವಾಗಿರಿಸುವುದು:

ಕಾನೂನು ಮತ್ತು ಶಿಸ್ತು ಪಾಲನೆಗೆ ಸಂಬಂಧಿಸಿದ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಅದರಲ್ಲಿಯೂ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ತೆಗೆದುಕೊಳ್ಳುವ ದಿಟ್ಟ ನಿರ್ಧಾರದ ಮೂಲಕ ಕೋಮುಗಲಭೆಯನ್ನು ನಿಯಂತ್ರಿಸಬಹುದು.

8) ಮುನ್ನೆಚ್ಚರಿಕೆ ವಹಿಸುವುದು:

ಆಗಾಗ್ಗೆ ಕೋಮುಗಲಭೆ ಸಂಭವಿಸುವ ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಬೇಕು. ಗುಪ್ತಚರ ವರದಿಗಳ ಮೂಲಕ ಅಂತಹ ಪ್ರದೇಶಗಳಲ್ಲಿ ಕೋಮುಗಲಭೆ ಸಂಭವಿಸುವ ಸಾಧ್ಯತೆಗಳನ್ನು ತಿಳಿದುಕೊಂಡು, ಅವುಗಳನ್ನು ತಪ್ಪಿಸಲು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕೋಮುಗಲಭೆಗೆ ಪ್ರಚೋದನೆ ನೀಡಬಹುದಾದ ಸಂಶಯಾಸ್ಪದ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಬಂಧನ ಕಾಯ್ದೆ (Preventive Detention Act) ಯಡಿಯಲ್ಲಿ ಬಂಧಿಸುವುದು ಕೂಡ ಕೋಮುವಾದವನ್ನು ನಿಗ್ರಹಿಸುವ ಪರಿಣಾಮಕಾರಿ ವಿಧಾನವಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸುವುದು ಒಳಿತು.

9) ಜಾತ್ಯಾತೀತ ಶಿಕ್ಷಣ:

ವಿದ್ಯಾರ್ಥಿಗಳಿಗೆ ಜಾತ್ಯಾತೀತ ಶಿಕ್ಷಣವನ್ನು ನೀಡುವುದರ ಮೂಲಕ ಕೋಮುವಾದವನ್ನು ನಿಗ್ರಹಿಸಬಹುದು. ವಿವಿಧ ಧರ್ಮೀಯರಲ್ಲಿ ಪರಸ್ಪರ ಪ್ರೀತಿ, ಗೌರವ, ಧಾರ್ಮಿಕ ಸಹಿಷ್ಣುತೆ, ಧಾರ್ಮಿಕ ಸಾಮರಸ್ಯವನ್ನುಂಟು ಮಾಡುವ ಪಠ್ಯಕ್ರಮವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಇಂಥಹ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಜಾತ್ಯಾತೀತತೆಯ ಮನೋಭಾವನೆಯನ್ನು ಮೂಡಿಸಿ ಕೋಮುವಾದವನ್ನು ನಿಗ್ರಹಿಸಬಲ್ಲದು. ಕೋಮು ಭಾವನೆಯನ್ನು ಕೆರಳಿಸುವಂತಹ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬಾರದು. ಒಂದು ವೇಳೆ ಈಗಾಗಲೇ ಅಂತಹ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದರೆ ಅದನ್ನು ಕೈ ಬಿಡಬೇಕು.3

10) ಶೈಕ್ಷಣಿಕ ಸಂಸ್ಥೆಗಳ ಪಾತ್ರ:

ಶಿಕ್ಷಣ ಸಂಸ್ಥೆಗಳು ಕೂಡ ಕೋಮುವಾದವನ್ನು ನಿಗ್ರಹಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜಾತ್ಯಾತೀತ ಮನೋಭಾವನೆಯನ್ನು ಬೆಳೆಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಎಲ್ಲ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಆಚರಿಸಬೇಕು. ಭಾರತೀಯ ಸಂಸ್ಕೃತಿಗೆ ವಿವಿಧ ಧರ್ಮಗಳು ನೀಡಿರುವ ಕೊಡುಗೆಯನ್ನು ವಿದ್ಯಾರ್ಥಿ ಸಮುದಾಯದ ಮನಮುಟ್ಟುವಂತೆ ಶಿಕ್ಷಣ ಸಂಸ್ಥೆಗಳು ವಿವರಿಸಬೇಕು.

ಜಾತ್ಯಾತೀತತೆಯ ಮುಂದಿರುವ ಸವಾಲುಗಳು, ಜಾತೀಯತೆ ಮತ್ತು ಕೋಮುವಾದದ ಅಪಾಯಗಳು, ಇಂತಹ ಜ್ವಲಂತ ಸಮಸ್ಯೆಗಳನ್ನು ಕುರಿತ ವಿಚಾರ ಸಂಕಿರಣ, ಚರ್ಚೆಗಳನ್ನು ಹಾಗೂ ವಿಶೇಷ ಉಪನ್ಯಾಸಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧನೆ ಮಾಡಬಾರದು.

11) ಧಾರ್ಮಿಕ ಸ್ಥಳಗಳ ಮೇಲೆ ಕಣ್ಣಾವಲು:

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಕಾರ್ಯಗಳಿಗೆ ಬದಲಾಗಿ ಕೋಮುವಾದವನ್ನು ಪ್ರಚೋದಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ತೀವ್ರ ನಿಗಾ ಇಡುವುದರ ಮೂಲಕ ಇಂತಹ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ಉದ್ದೇಶವನ್ನು ಹೊರತುಪಡಿಸಿ ಬೇರಾವ ಉದ್ದೇಶಗಳಿಗೂ ಬಳಸದಂತೆ ನಿಷೇಧಿಸಬೇಕು.

12) ಬಲವಂತದ ಮತಾಂತರವನ್ನು ನಿಷೇಧಿಸುವುದು:

ಭಾರತ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ಭಾರತೀಯನಿಗೆ ತನ್ನ ಮನಸ್ಸಾಕ್ಷಿಗನುಗುಣವಾಗಿ ಯಾವ ಧರ್ಮವನ್ನು ಬೇಕಾದರೂ ಪಾಲಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಯಾವುದೇ ಧರ್ಮದ ನಾಯಕರು ಆಸೆ, ಆಮಿಷಗಳನ್ನು ತೋರಿಸುವುದರ ಮೂಲಕ ಜನರನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಬಾರದು. ಏಕೆಂದರೆ ಬಲವಂತದ ಮತಾಂತರ ಕೋಮು ಗಲಭೆಗೆ ಎಡೆ ಮಾಡಿದಂತಾಗುತ್ತದೆ.

ಕೆಲವು ಕ್ರಿಶ್ಚಿಯನ್ ಮಿಷಿನರಿಗಳು ಮತಾಂತಗರ ಕಾರ್ಯದಲ್ಲಿ ತೊಡಗಿವೆ ಎಂಬ ಸಂದೇಹದಿಂದ ಬಜರಂಗ ದಳದ ಸದಸ್ಯ ಧಾರಾಸಿಂಗ್ ಮತ್ತು ಹಿಂಬಾಲಕರು ಆಸ್ಟ್ರೇಲಿಯಾದ ಪಾದ್ರಿ ಗ್ರಹಾಂ ಸ್ಪೇನ್ ಮತ್ತು ಅವನ ಮಕ್ಕಳನ್ನು ಒರಿಸ್ಸಾದಲ್ಲಿ ಸಜೀವ ದಹನ ಮಾಡಿರುವ ಅಮಾನವೀಯ ಘಟನೆಯನ್ನು ಸ್ಮರಿಸಬಹುದಾಗಿದೆ. ಸರ್ಕಾರ ಕಾಯ್ದೆಯ ಮೂಲಕ ಬಲವಂತದ ಮತಾಂತರವನ್ನು ನಿಷೇಧಿಸುವ ಅಗತ್ಯವಿದೆ. ಕುಮಾರಿ ಜಯಲಲಿತಾ ನೇತೃತ್ವದ ಎಐಡಿಎಂಕೆ ಸರ್ಕಾರವು ಬಲವಂತ ಮತಾಂತರ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿರುವುದು ಈ ದಿಕ್ಕಿನಲ್ಲಿ ಒಂದು ದಿಟ್ಟ ಹಾಗೂ ಸ್ವಾಗತಾರ್ಹ ಹೆಜ್ಜೆ ಎಂದು ಹೇಳಬಹುದು.

13) ಧರ್ಮವನ್ನು ಸರಿಯಾಗಿ ಅರ್ಥೈಸುವುದು:

ಧರ್ಮಗಳನ್ನು ಗುತ್ತಿಗೆ ಪಡೆದಿರುವಂತೆ ವರ್ತಿಸುತ್ತಿರುವ ಕೆಲವು ಧಾರ್ಮಿಕ ನಾಯಕರು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿರುವುದು ಕೂಡಾ ಕೋಮುವಾದಕ್ಕೆ ಎಡೆ ಮಾಡಿಕೊಡುತ್ತದೆ. ಭಗವದ್ಗೀತೆ, ಖುರಾನ್, ಬೈಬಲ್, ಗುರು ಗ್ರಂಥಸಾಹೀಬ್ ಹೀಗೆ ಎಲ್ಲ ಧರ್ಮ ಗ್ರಂಥಗಳೂ ಪ್ರೀತಿ, ಪ್ರೇಮ, ಸ್ನೇಹ, ಔದಾರ, ದಯೆ, ಕರುಣೆ ಮುಂತಾದ ಉದಾತ್ತ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆಯೇ ಎನ್: ಹಿಂಸೆ, ದ್ವೇಷ, ಅಸೂಯೆ, ವೈರತ್ವ ಮುಂತಾದ ಅಮಾನವೀಯ ಭಾವನೆಗಳನ್ನಲ್ಲ ಎಂಬ ಸತ್ಯವನ್ನು ವಿವಿಧ ಧರ್ಮೀಯರು ಅರಿತುಕೊಳ್ಳಬೇಕು. ವಿವಿಧ ಧರ್ಮಗಳು ಪ್ರತಿಪಾದಿಸುವ ಈ ಮೌಲ್ಯಗಳನ್ನು ಜನರು ತಮ್ಮ ದೈನಂದಿನ ಜೀವನದಲ್ಲಿ ಪಾಲಿಸುವುದರಿಂದ ಕೋಮುವಾದವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬಹುದು. ಧರ್ಮವನ್ನು ಸರಿಯಾಗಿ ಅರ್ಥೈಸುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ.

14) ರಾಷ್ಟ್ರೀಯ ಭಾವೈಕ್ಯತೆ:

ಭಾರತೀಯರೆಲ್ಲರೂ ರಾಷ್ಟ್ರೀಯ ಭಾವೈಕ್ಯತಾ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಕೋಮುವಾದವನ್ನು ನಿಗ್ರಹಿಸಬಹುದು. ರಾಷ್ಟ್ರೀಯ ಭಾವೈಕ್ಯತೆಯು ಭಾರತೀಯರಲ್ಲಿ ಜಾತಿ, ಮತ, ಧರ್ಮ, ಲಿಂಗ, ಪ್ರದೇಶ, ಭಾಷೆ ಇತ್ಯಾದಿ ಭೇದಗಳನ್ನು ನಿವಾರಿಸಿ ನಾವೆಲ್ಲ ಒಂದೇ ಎಂಬ ಸಾಮರಸ್ಯವನ್ನು ಮೂಡಿಸಬಲ್ಲದು. ಈ ಭಾವನೆಯು ವಿವಿಧ ಧರ್ಮೀಯರ ನಡುವೆ ದ್ವೇಷ, ರೋಷ, ಹಿಂಸೆಗಳನ್ನು ಪ್ರಚೋದಿಸುವ ಬದಲು ಪ್ರೀತಿ, ಪ್ರೇಮ ಸಹಕಾರ, ಸಹಿಷ್ಣುತೆ ಮುಂತಾದ ಸದ್ಭಾವನೆಗಳನ್ನು ಬೆಳೆಸುತ್ತದೆ.

ರಾಷ್ಟ್ರೀಯ ಭಾವೈಕ್ಯತೆಯು ಕೋಮುವಾದವೆಂಬ ಭೂತವನ್ನು ದಹನ ಮಾಡುವ ದಿವ್ಯ ಮಂತ್ರವಿದ್ದಂತೆ, ಯಾವುದೇ ನಿರ್ದಿಷ್ಟ ಧರ್ಮ, ಜಾತಿ, ಭಾಷೆಗೆ ಸೇರಿದ ಸಮೂಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೆ ಎಲ್ಲರನ್ನೂ ಸಮಾನರಾಗಿ ಕಾಣುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಬಹುದು. ಆದರೆ ಇದು ಅತ್ಯಂತ ನಿಧಾನ ಹಾಗೂ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ.

15) ವೈಚಾರಿಕ ಮನೋಭಾವನೆಯ ಬೆಳವಣಿಗೆ:

ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಮುಂತಾದ ಎಲ್ಲ ಧರ್ಮಗಳನ್ನು ಅನುಸರಿಸುವ ಜನರು “ಮಾನವ ಧರ್ಮಕ್ಕಿಂತ ಮಿಗಿಲಾದ ಇನ್ನೊಂದು ಧರ್ಮವಿಲ್ಲ” ಎಂಬ ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಿಂಸೆ, ದ್ವೇಷ ಕ್ರೌರ್ಯಗಳನ್ನು ಪ್ರಚೋದಿಸುವ ಧರ್ಮ ಧರ್ಮವೇ ಅಲ್ಲ ಎನ್ನುವ ಭಾವನೆ ಜನರಲ್ಲಿ ಮೂಡಬೇಕು. ದಯೆ, ಅನುಕಂಪ, ಪ್ರೀತಿ, ಪ್ರೇಮ, ಸಹಕಾರ ಮುಂತಾದ ಮಾನವೀಯ ಮೌಲ್ಯಗಳು ಪೂಜೆ, ಪುನಸ್ಕಾರ, ಪ್ರಾರ್ಥನೆ, ನಮಾಜು, ಯಾಗ ಯಜ್ಞಾದಿಗಳಿಗಿಂತಲೂ ಮಿಗಿಲು ಎಂಬ ಭಾವನೆಯನ್ನು ಜನರು ಬೆಳೆಸಿಕೊಳ್ಳಬೇಕು. ಇಂಥಹ ವೈಚಾರಿಕ ಮನೋಭಾವನೆಯು ಖಂಡಿತವಾಗಿಯೂ ಕೋಮುವಾದವನ್ನು ನಿಗ್ರಹಿಸುತ್ತದೆ.

ಗುಡಿ, ಮಸೀದಿ, ಚರ್ಚಗಳ ಬಿಟ್ಟು ಹೊರಬನ್ನಿ ಎಂಬ ಕುವೆಂಪುರವರ ಕವಿವಾಣಿ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಳಕು ತೋರಬಲ್ಲದು.

ಪ್ರಸ್ತುತವಾಗಿ ಕೋಮುವಾದವು ಭಾರತದ ಅತಿ ದೊಡ್ಡ ಸವಾಲಾಗಿದೆ. ಸಮಾಜವಾಗಿ ನೆಹರೂಜಿ ಪ್ರಕಾರ ಈ ಕೋಮುವಾದವು, ಪ್ರಚೋದನೆಯು ‘ವಿದೇಶ ಆಕ್ರಮಣ’ಕ್ಕಿಂತ ಅಪಾಯಕಾರಿಯಾದುದು. ಯಾಕೆಂದರೆ ವಿದೇಶಿ ಆಕ್ರಮಣದ ಸಂದರ್ಭದಲ್ಲಿ ರಾಷ್ಟ್ರದ ಜನತೆಯು ಜಾತಿ, ಮತ, ಲಿಂಗ, ಧರ್ಮಗಳನ್ನು ಮರೆತು ಒಂದಾಗುತ್ತಾರೆ. ಇದರಿಂದ ರಾಷ್ಟ್ರೀಯ ಐಕ್ಯತೆ ಸಾಧ್ಯವಾಗುತ್ತದೆ. ಆದರೆ ಈ ಕೋಮುವಾದವು ಜನರನ್ನು ಜಾತಿ ಮತ್ತು ಧರ್ಮಗಳ ಪೈಕಿ ವಿಭಾಜಿಸುತ್ತದೆ.

ಮುಂಬೈ ಸರಣಿ ಸ್ಫೋಟ, ಗೋದ್ರಾ ಹತ್ಯಾಕಾಂಡ, ಬಾಬರಿ ಮಸೀದಿ ಪ್ರಕರಣ, ಸಿಬ್ಬರ ಹತ್ಯಾಕಾಂಡ, ಈದ್ಗಾ ಪ್ರಕರಣ, ಪಾನ್ಸರ್, ದಾಬೋಲ್ಕರ್, ಎಂ.ಎಂ.ಕಲಬುರ್ಗಿಯವರ ಹತ್ಯೆಗಳಲ್ಲಿ ಈ ಅಸಹಿಷ್ಣುತೆ ಮತ್ತು ಕೋಮುವಾದದ ಛಾಯೆಯಿದೆ. ಎಲ್ಲಿಯ ತನಕ ಮಾನವ ಪ್ರೇಮ, ವಿಶ್ವಭಾತೃತ್ವ, ವೈಚಾರಿಕತೆ, ನಾವು ನಮ್ಮವರು ಎಂಬ ಭಾವನೆ ನಮ್ಮಲ್ಲಿ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಈ ಅಸಹಿಷ್ಣುತೆ, ಕೋಮುವಾದ ನಿಲ್ಲುವುದಿಲ್ಲ. ಇದಕ್ಕೆ ಪರಿಹಾರ, ಸರ್ವಧರ್ಮ ಸಮಾನತೆ, ವಿಶ್ವ ಮಾನವೀಯತೆ, ಸಮಸಮಾಜದ ನಿರ್ಮಾಣ, ಮೌಲ್ಯಸ್ತಾಯಿ ಸಮಾಜದ ಬೆಳವಣಿಗೆ ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಪ್ರೇಮ Human Love

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....